
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು GST ಕುರಿತು ಪ್ರಶ್ನೆ ಕೇಳಿದ ಉದ್ಯಮಿಯನ್ನು ಕೊಠಡಿಗೆ ಕರೆಸಿ ಕ್ಷಮೆ ಕೇಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರಮುಖ ಉದ್ಯಮಿಗಳೊಂದಿಗೆ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾವಹಿಸಿದ್ದರು.
ಸಭೆಯಲ್ಲಿನ ಚರ್ಚೆಯ ವೇಳೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಕೀರ್ಣತೆಗಳ ಬಗ್ಗೆ ಅನ್ನಪೂರ್ಣ ಹೊಟೆಲ್ ಗಳ ಸಮೂಹದ ಮಾಲೀಕ ಶ್ರೀನಿವಾಸನ್ ಅವರು ನಿರ್ಮಲಾ ಸೀತಾರಾಮನ್ ಅವರನ್ನು ಪ್ರಶ್ನಿಸಿದ್ದರು.
ಜಿಎಸ್‌ಟಿ ಬಗ್ಗೆ ತಮ್ಮನ್ನು ಪ್ರಶ್ನಿಸಿದ್ದಕ್ಕೆ ಶ್ರೀನಿವಾಸನ್ ವಿರುದ್ಧ ಗುಡುಗಿದ ನಿರ್ಮಲಾ ಸೀತಾರಾಮನ್, ತಮ್ಮ ಬಳಿ ಶ್ರೀನಿವಾಸನ್ ಕ್ಷಮೆ ಕೇಳುವಂತೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತ ವಿಡಿಯೋಗಳೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಜಿಎಸ್‌ಟಿ ಬಗೆಗಿನ ಸಂಕೀರ್ಣತೆಗಳ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅನ್ನಪೂರ್ಣ ಗ್ರೂಪ್ ಅಧ್ಯಕ್ಷ ಶ್ರೀನಿವಾಸನ್ ಪ್ರಶ್ನಿಸಿದ್ದಾರೆ. ಬಳಿಕ, ತಮ್ಮ ಪ್ರಶ್ನೆಯ ಕಾರಣಕ್ಕಾಗಿ ಕ್ಷಮೆ ಕೇಳಿದ್ದಾರೆ. ಅವರು ಪ್ರಶ್ನಿಸಿ, ಕ್ಷಮೆ ಕೇಳಿದ ಘಟನೆಯ ವಿಡಿಯೋ ವೈರಲ್ ಆಗಿದ್ದು, ನಿರ್ಮಲಾ ಸೀತಾರಾಮನ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನು ಪ್ರಶ್ನೆ ಕೇಳಿದ್ದರು?
ಸಭೆಯಲ್ಲಿ ಮಾತನಾಡಿದ್ದ ಶ್ರೀನಿವಾಸನ್ ಅವರು, 'ವಿವಿಧ ಜಿಎಸ್‌ಟಿ ದರಗಳಿಂದ ರೆಸ್ಟೋರೆಂಟ್‌ಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಮನ ಸೆಳೆದರು. “ಸಿಹಿತಿಂಡಿಗಳ ಮೇಲೆ 5% ಮತ್ತು ಕೆನೆ ತುಂಬಿದ ಪೇಸ್ಟ್ರಿಗಳ ಮೇಲೆ 18% ಜಿಎಸ್‌ಟಿ ವಿಧಿಸಲಾಗುತ್ತಿದೆ. ನಮ್ಮ ಬೇಕರಿಯಲ್ಲಿ ಖಾಲಿ ಬನ್ ಮಾರಿದರೆ 5% ಜಿಎಸ್‌ಟಿ. ಅದೇ ಬನ್‌ಗೆ ಕ್ರೀಮ್ ಹಾಕಿ ಕ್ರೀಮ್ ಬನ್ ಮಾರಿದರೆ 18% ಜಿಎಸ್‌ಟಿ. ಯಾಕೆ ಹೀಗೆ?” ಎಂದು ಹಾಸ್ಯಾತ್ಮಕವಾಗಿ ವಿವರಿಸಿದರು. ಕೆಲ ಗ್ರಾಹಕರಂತೂ ನಮಗೆ ಕ್ರೀಮ್ ಬನ್ ಬೇಡ.. ಬನ್ ಮತ್ತು ಕ್ರೀಂ ಪ್ರತ್ಯೇಕವಾಗಿ ನೀಡಿ.. ಇದರಿಂದ ತೆರಿಗೆ ಉಳಿಯುತ್ತದೆ ಎಂದು ಹಾಸ್ಯ ಮಾಡುತ್ತಾರೆ ಎಂದು ಹೇಳಿದ್ದಾರೆ.
ಕೊಠಡಿಗೆ ಬಂದು ಕ್ಷಮೆ ಕೇಳಿದ ಶ್ರೀನಿವಾಸನ್?
ಇನ್ನು ಶ್ರೀನಿವಾಸನ್ ಪ್ರಶ್ನೆ ಕೇಳುವಾಗ ವೇದಿಕೆಯಲ್ಲಿ ನಗುತ್ತಲೇ ಉತ್ತರಿಸಿದ್ದ ನಿರ್ಮಲಾ ಸೀತಾರಾಮನ್ ಬಳಿಕ ಅವರನ್ನು ಕೊಠಡಿಗೆ ಕರೆಸಿಕೊಂಡು ಕ್ಷಮೆ ಕೇಳಿಸಿದ್ದಾರೆ ಎನ್ನಲಾಗಿದೆ. ಸಭೆಯ ಮರುದಿನ ಶ್ರೀನಿವಾಸನ್ ಅವರು ತಾವು ಸಭೆಯಲ್ಲಿ ಎತ್ತಿದ ಪ್ರಶ್ನೆಯ ಕಾರಣಕ್ಕಾಗಿ ಕ್ಷಮೆ ಕೇಳಿದ್ದಾರೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಕೊಠಡಿಯೊಂದರಲ್ಲಿ ಮೂರು ಜನರಿದ್ದು, ಅವರ ಪೈಕಿ ಶ್ರೀನಿವಾಸನ್ ಅವರು ನಿರ್ಮಲಾ ಸೀತಾರಾಮನ್ ಅವರಲ್ಲಿ ಎದ್ದು ನಿಂತು, ತಪ್ಪಾಗಿದೆ ಎಂದು ಕೈ ಮುಗಿದಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಕಾಂಗ್ರೆಸ್ ಕಿಡಿ
ಇನ್ನು ಕ್ಷಮೆ ಕೇಳುವ ವಿಡಿಯೋ ವೈರಲ್ ಆಗಿರುವಂತೆಯೇ, ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕರು, “ನಿರ್ಮಲಾ ಸೀತಾರಾಮನ್ ಅವರು ಕೊಯಮತ್ತೂರಿನ ಹೆಮ್ಮೆಯ ಅನ್ನಪೂರ್ಣ ಗ್ರೂಪ್ ಮುಖ್ಯಸ್ಥ ಶ್ರೀನಿವಾಸನ್ ಅವರನ್ನು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಶ್ರೀನಿವಾಸನ್ ಮಾಡಿದ ಅಪರಾಧವೇನು? ಇದು ಬಿಜೆಪಿ ನಾಯಕರ ದುರಹಂಕಾರವನ್ನು ಬಯಲು ಮಾಡುತ್ತದೆ. ಮಾತ್ರವಲ್ಲದೆ, ತಮಿಳುನಾಡಿನ ಜನತೆಗೆ ಮಾಡಿದ ಅವಮಾನವೂ ಆಗಿದೆ. ಹೀಗಾಗಿಯೇ ಬಿಜೆಪಿ ಎಂದಿಗೂ ತಮಿಳುನಾಡನ್ನು ಗೆಲ್ಲುವುದಿಲ್ಲ. ಅಹಂಕಾರಕ್ಕೂ ಒಂದು ಮಿತಿ ಇರಬೇಕು” ಎಂದು ಕಿಡಿಕಾರಿದ್ದಾರೆ.
ಬಿಜೆಪಿ ತಿರುಗೇಟು
ಇನ್ನು ಕಾಂಗ್ರೆಸ್ ಟ್ವೀಟ್ ಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕರು, 'ಏಕೆ ಸುಳ್ಳು ಪ್ರಚಾರ ಮಾಡುತ್ತಿದ್ದೀರಿ? ನಿರ್ಮಲಾ ಅವರೇ ಶ್ರೀನಿವಾಸನ್ ರನ್ನು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಾರೆ? ಅದೇ ಸಭೆಯಲ್ಲಿ ಇದೇ ಉದ್ಯಮಿ ಶ್ರೀನಿವಾಸನ್ ಅವರು ಕೇಂದ್ರ ಸರ್ಕಾರವನ್ನು ಮತ್ತು ಅದರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅದೇ ಅನ್ನಪೂರ್ಣ ಬ್ರ್ಯಾಂಡ್ ಮಾಲೀಕರು COVID-19 ಸಮಯದಲ್ಲಿ ಹೋಟೆಲ್ ಉದ್ಯಮಗಳಿಗೆ ನೀಡಿದ ಬೆಂಬಲಕ್ಕಾಗಿ ಮೋದಿ ಸರ್ಕಾರ ಮತ್ತು ವಿತ್ತ ಸಚಿವರನ್ನು ಅನ್ನು ಶ್ಲಾಘಿಸಿದ್ದಾರೆ. ನಿರೂಪಣೆಯನ್ನು ತಿರುಚಬೇಡಿ! ಎಂದು ಕಿಡಿಕಾರಿದ್ದಾರೆ.
Advertisement