
ಚಂಡೀಘಡ: ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ ಪೌರಾಣಿಕ ಸ್ಥಳ ಕುರುಕ್ಷೇತ್ರದಿಂದ ಚಾಲನೆ ನೀಡಲಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದು ಹರಿಯಾಣದಲ್ಲಿ ಮೋದಿ ಅವರ ಮೊದಲ ರ‍್ಯಾಲಿ ಆಗಿದೆ. ಪ್ರಧಾನಿ ನರೇಂದ್ರ ಶನಿವಾರ 2 ಗಂಟೆಗೆ ಥೇಮ್ ಪಾರ್ಕ್ ಗೆ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹಾಗೂ ಸಮಾಜದ ಪ್ರತಿಯೊಂದು ವರ್ಗಕ್ಕೂ ಗೌರವ ಹೆಚ್ಚಿಸಲು ಕಳೆದ 10 ವರ್ಷಗಳಿಂದ ಹಗಲಿರುಳು ಶ್ರಮಿಸುತ್ತಿರುವ ನಮ್ಮ ನಾಯಕನ ಭಾಷಣ ಕೇಳಲು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ. ರೈತರು, ಮಹಿಳೆಯರು, ಯುವಕರು ಅಥವಾ ಬಡವರು ಹೀಗೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರಧಾನಿ ಮೋದಿ ಗೌರವದಿಂದ ಕಂಡಿದ್ದಾರೆ ಎಂದು ಹರಿಯಾಣ ಸಿಎಂ ಹೇಳಿದ್ದಾರೆ.
ಪ್ರಧಾನಿ ಮೋದಿ ರ‍್ಯಾಲಿ ಸ್ಥಳದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಪ್ರಧಾನಿ ಮೋದಿ ಭೇಟಿ ಕುರುಕ್ಷೇತ್ರ ಮಾತ್ರವಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳಾದ ಕರ್ನಾಲ್, ಅಂಬಾಲ, ಕೈಥಾಲ್ ಮತ್ತು ಯಮುನಾನಗರದಲ್ಲಿ ಬಿಜೆಪಿ ಪ್ರಾಬಲ್ಯ ಗಳಿಸುವಲ್ಲಿ ನೆರವಾಗಲಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಅವರು ಕೂಡಾ ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರ ಹಿಂದೂಗಳ ಮಹತ್ವದ ಸ್ಥಳವಾಗಿದೆ. ಇಲ್ಲಿ ಕೃಷ್ಣ, ಅರ್ಜುನನಿಗೆ ಗೀತೋಪದೇಶ ಮಾಡಿದ್ದ ಎನ್ನಲಾಗಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
Advertisement