ಕೋಲ್ಕತ್ತ: ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಬಿಐ ಶನಿವಾರ ಸಂಜೆ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಹಾಗೂ ತಾಲಾ ಪೊಲೀಸ್ ಠಾಣೆಯ ಎಸ್ ಹೆಚ್ಒ ಅಭಿಜಿತ್ ಮೊಂಡಲ್ ಅವರನ್ನು ಬಂಧಿಸಿದೆ.
ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆಯ ಹತ್ಯೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಕ್ರಮ ಇದಾಗಿದೆ.
ಬಂಧನಗಳ ಬಗ್ಗೆ ನಿರ್ದಿಷ್ಟ ವಿವರಗಳು ಇನ್ನೂ ಬಹಿರಂಗವಾಗಿಲ್ಲವಾದರೂ, ಘೋಷ್ ಮತ್ತು ಮೊಂಡಲ್ ಇಬ್ಬರೂ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿರುವುದನ್ನು ಮೂಲಗಳು ಬಹಿರಂಗಪಡಿಸಿವೆ. ನ್ಯಾಯಾಲಯದ ಕಲಾಪದಲ್ಲಿ ಸಿಬಿಐ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.
ಈ ಹಿಂದೆ ಬಂಧಿತರಾಗಿರುವ ಸಂಜಯ್ ರಾಯ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಸಂದೀಪ್ ಘೋಷ್ ಮತ್ತು ಎಸ್‌ಎಚ್‌ಒ ಅಭಿಜಿತ್ ಮೊಂಡಲ್ ನಿರ್ಲಕ್ಷ್ಯ ಮತ್ತು ಸಾಕ್ಷ್ಯ ನಾಶದ ಆರೋಪ ಎದುರಿಸುತ್ತಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಜೊತೆಗೆ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹಣಕಾಸಿನ ಅವ್ಯವಹಾರವನ್ನು ಒಳಗೊಂಡ ಪ್ರತ್ಯೇಕ ಭ್ರಷ್ಟಾಚಾರ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಂದೀಪ್ ಘೋಷ್ ಮತ್ತು ಇತರ ಮೂವರನ್ನು ಬಂಧಿಸಲಾಗಿತ್ತು. ಇತರ ಮೂವರು ವ್ಯಕ್ತಿಗಳಲ್ಲಿ ಘೋಷ್ ಅವರ ಭದ್ರತಾ ಸಿಬ್ಬಂದಿ, ಅಫ್ಸರ್ ಅಲಿ ಖಾನ್ ಮತ್ತು ಇಬ್ಬರು ಆಸ್ಪತ್ರೆಯ ಮಾರಾಟಗಾರರಾದ ಬಿಪ್ಲವ್ ಸಿಂಘಾ ಮತ್ತು ಸುಮನ್ ಹಜ್ರಾ ಸೇರಿದ್ದಾರೆ.
Advertisement