Kolkata Rape and Murder: ವೈದ್ಯರ ಪ್ರತಿಭಟನಾ ಸ್ಥಳಕ್ಕೆ ಮಮತಾ ಬ್ಯಾನರ್ಜಿ ಅಚ್ಚರಿ ಭೇಟಿ; ಕರ್ತವ್ಯಕ್ಕೆ ಮರಳಲು ಮನವಿ!

ಆರ್‌ಜಿ ಕರ್ ಘಟನೆ ಬಳಿಕ ಕಿರಿಯ ವೈದ್ಯರ ಮುಷ್ಕರದಿಂದಾಗಿ ರಾಜ್ಯದಲ್ಲಿ ಇದುವರೆಗೆ 29 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಕೋರ್ಟ್ ಗೆ ಹೇಳಿಕೆ ನೀಡಿದೆ.
Mamata banerjee
ಪ್ರತಿಭಟನಾ ನಿರತ ವೈದ್ಯರನ್ನು ಭೇಟಿ ಮಾಡಿದ ಮಮತಾ ಬ್ಯಾನರ್ಜಿ
Updated on

ಕೋಲ್ಕತಾ: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ನಡೆಸುತ್ತಿರುವ ಪ್ರತಿಭಟನೆ 5ನೇ ದಿನಕ್ಕೆ ಕಾಲಿಟ್ಟಿದ್ದು, ಅಚ್ಚರಿ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಆರ್‌ಜಿ ಕರ್ ಘಟನೆ ಬಳಿಕ ಕಿರಿಯ ವೈದ್ಯರ ಮುಷ್ಕರದಿಂದಾಗಿ ರಾಜ್ಯದಲ್ಲಿ ಇದುವರೆಗೆ 29 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಕೋರ್ಟ್ ಗೆ ಹೇಳಿಕೆ ನೀಡಿದೆ.

ಅಂತೆಯೇ ಆ 29 ಜನರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಕಿರಿಯ ವೈದ್ಯರ ಮುಷ್ಕರದಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, 29 ಮಂದಿ ಸಾವನ್ನಪ್ಪಿದ್ದು, ಇದು ಅತ್ಯಂತ ದುರದೃಷ್ಟಕರ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.

ವೈದ್ಯರ ಪ್ರತಿಭಟನಾ ಸ್ಥಳಕ್ಕೆ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಶನಿವಾರ ಸ್ವಾಸ್ಥ್ಯ ಭವನದ ಹೊರಗೆ ಪ್ರತಿಭಟನಾನಿರತ ವೈದ್ಯರನ್ನು ಭೇಟಿ ಮಾಡಿದ್ದಾರೆ. ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಪ್ರಶಿಕ್ಷಣ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಅವರಲ್ಲಿ ಕೆಲಸಕ್ಕೆ ಮರಳುವಂತೆ ಮಮತಾ ಒತ್ತಾಯಿಸಿದ್ದಾರೆ.

ಈ ವೇಳೆ ಕಿರಿಯ ವೈದ್ಯರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, 'ನೀವು ಮಳೆಯಲ್ಲಿ ನೆನೆದು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ನಾನು ನಿಮ್ಮ ಬೇಡಿಕೆಗಳನ್ನು ಅಧ್ಯಯನ ಮಾಡುತ್ತೇನೆ, ಯಾರಾದರೂ ತಪ್ಪಿತಸ್ಥರಾಗಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.

ನಾನು ನಿಮ್ಮನ್ನು ಭೇಟಿಯಾಗಲು ನಿಮ್ಮ ‘ದೀದಿ’ಯಾಗಿ ಬರಬೇಕೇ ಹೊರತು ಮುಖ್ಯಮಂತ್ರಿಯಾಗಿ ಅಲ್ಲ ಎಂದೂ ಬ್ಯಾನರ್ಜಿ ಹೇಳಿದ್ದಾರೆ. “ನಿಮ್ಮ ಪ್ರತಿಭಟನೆಯ ಉದ್ದೇಶ ನನಗೆ ಅರ್ಥವಾಗಿದೆ. ನಾನು ವಿದ್ಯಾರ್ಥಿ ನಾಯಕಿಯೂ ಆಗಿದ್ದೆ. ನಿಮಗೆ ನ್ಯಾಯ ಕೊಡಿಸುತ್ತೇನೆ. ನಿಮ್ಮ ಸಹಾಯವಿಲ್ಲದೆ ಹಿರಿಯರು (ವೈದ್ಯರು) ಕೆಲಸ ಮಾಡಲು ಸಾಧ್ಯವಾಗುವುದಿಲ್ಲ, ಕೆಲಸವನ್ನು ಪುನರಾರಂಭಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಿಮ್ಮ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

ಮುಂದುವರೆದ ವೈದ್ಯರ ಪ್ರತಿಭಟನೆ

ಸಾಲ್ಟ್ ಲೇಕ್‌ನಲ್ಲಿರುವ ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಚೇರಿಯ ಹೊರಗೆ ವೈದ್ಯಾಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆ ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ನಗರದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ನ್ಯಾಯಕ್ಕಾಗಿ ಅವರು ಒತ್ತಾಯಿಸಿದ್ದಾರೆ. ಸೆಪ್ಟೆಂಬರ್ 10 ರಂದು ಸಂಜೆ 5 ಗಂಟೆಗೆ ಪ್ರತಿಭಟನಾಕಾರರು ಕೆಲಸ ಪುನರಾರಂಭಿಸುವಂತೆ ಸುಪ್ರೀಂಕೋರ್ಟ್ ನೀಡಿದ ಗಡುವನ್ನು ಲೆಕ್ಕಿಸದೆ ಪ್ರತಿಭಟನೆ ಮುಂದುವರಿದಿದೆ.

ಆರ್‌ಜಿ ಆಸ್ಪತ್ರೆಯಲ್ಲಿ ನಡೆದ ಘಟನೆ ವೇಳೆ ತಮ್ಮ ಕರ್ತವ್ಯ ನಿರ್ವಹಿಸಲು ವಿಫಲವಾಗಿರುವ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್, ಆರೋಗ್ಯ ಕಾರ್ಯದರ್ಶಿ ಎನ್.ಎಸ್.ನಿಗಂ, ಆರೋಗ್ಯ ಸೇವೆಗಳ ನಿರ್ದೇಶಕ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಆಗಸ್ಟ್ 9 ರಿಂದ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ಎಲ್ಲಾ ಮಹಿಳಾ ಆರೋಗ್ಯ ವೃತ್ತಿಪರರಿಗೆ ಸಾಕಷ್ಟು ಸುರಕ್ಷತೆ ಮತ್ತು ಭದ್ರತಾ ಕ್ರಮಗಳನ್ನು ಒದಿಗಸಬೇಕು ಎಂದು ಪ್ರತಿಭಟನಾಕಾರರು ಬೇಡಿಕೆಯೊಡ್ಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com