ನವದೆಹಲಿ: ಮುಸ್ಲಿಮರ ಬಗ್ಗೆ ಮಾತನಾಡಿದ್ದ ಇರಾನ್ ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಭಾರತ ಸರಿಯಾಗಿಯೇ ಬಿಸಿ ಮುಟ್ಟಿಸಿದೆ.
ಭಾರತದ ವಿದೇಶಾಂಗ ಸಚಿವಾಲಯ ಅಯತೊಲ್ಲಾ ಅಲಿ ಖಮೇನಿ ಹೇಳಿಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಖಮೇನಿಗೆ ಬಂದಿರುವ ಮಾಹಿತಿ ತಪ್ಪು ಹಾಗೂ ಒಪ್ಪಲು ಸಾಧ್ಯವಿಲ್ಲದಂತಹದ್ದು ಎಂದು ಹೇಳಿದೆ.
ಭಾರತ, ಮ್ಯಾನ್ಮಾರ್, ಗಾಜಾ ಸೇರಿದಂತೆ ಹಲವೆಡೆ ಮುಸ್ಲಿಮರು ಎದುರಿಸುತ್ತಿರುವ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದ ಖಮೇನಿ, ನಿಜವಾದ ಇಸ್ಲಾಮಿಕ್ ಗುರುತಿಗೆ ಈ ಹೋರಾಟಗಳ ಅರಿವು ಅಗತ್ಯವಿದೆ ಎಂದು ಪ್ರತಿಪಾದಿಸಿದರು, ಮುಸ್ಲಿಂ ಸಮುದಾಯವು ಒಗ್ಗಟ್ಟಾಗಿ ನಿಲ್ಲುವಂತೆ ಒತ್ತಾಯಿಸಿದರು. ಮ್ಯಾನ್ಮಾರ್, ಗಾಜಾ, ಭಾರತ ಅಥವಾ ಇನ್ನಾವುದೇ ಸ್ಥಳದಲ್ಲಿ ಮುಸ್ಲಿಂ ಅನುಭವಿಸುತ್ತಿರುವ ನೋವನ್ನು ನಾವು ನಿರ್ಲಕ್ಷಿಸಿದರೆ ನಾವು ನಮ್ಮನ್ನು ಮುಸ್ಲಿಮರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಖಮೇನಿ ಬರೆದುಕೊಂಡಿದ್ದರು.
ತಕ್ಷಣವೇ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತ, "ತಪ್ಪು ಮಾಹಿತಿ ಮತ್ತು ಸ್ವೀಕಾರಾರ್ಹವಲ್ಲ" ಎಂದು ಖಮೇನಿ ಹೇಳಿಕೆಯನ್ನು ಖಂಡಿಸಿದೆ. ಇತರರ ಮೇಲೆ ತೀರ್ಪು ನೀಡುವ ಮೊದಲು ರಾಷ್ಟ್ರಗಳು ತಮ್ಮದೇ ಚರಿತ್ರೆಯನ್ನು ನೋಡಿಕೊಳ್ಳಬೇಕೆಂದು ಎಂಇಎ ಹೇಳಿದೆ.
Advertisement