ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ನಡುವೆಯೇ ದೆಹಲಿ ಎಎಪಿ ಶಾಸಕಾಂಗ ಪಕ್ಷದ ನಾಯಕಿ ಮತ್ತು ನೂತನ ಸಿಎಂ ಹುದ್ದೆಗೆ ಆಯ್ಕೆಯಾದ ಅತಿಶಿ ಮೊದಲ ಬಾರಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಅಬಕಾರಿ ನೀತಿ ಹಗರಣದಲ್ಲಿ ಜಾಮೀನು ಪಡೆದಿರುವ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದು, ಚುನಾವಣೆಗೆ ಮುಂದಾಗಿದ್ದಾರೆ.
ಈ ನಡುವೆ ಕೇಜ್ರಿವಾಲ್ ರಾಜಿನಾಮೆಯಿಂದ ತೆರವಾಗುವ ಸಿಎಂ ಸ್ಥಾನಕ್ಕೆ ಇಂದು ಅಯ್ತೆ ಪ್ರಕ್ರಿಯೆ ನಡೆದಿದ್ದು, ದೆಹಲಿ ಸಚಿವೆ ಆತಿಶಿ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಆತಿಶಿ, ತಮ್ಮನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದ ಅರವಿಂದ್ ಕೇಜ್ರಿವಾಲ್ ಗೆ ಧನ್ಯವಾದ ಹೇಳಿದರು. 'ಮೊದಲು ನಾನು ದೆಹಲಿಯ ಜನಪ್ರಿಯ ಸಿಎಂ, ಆಪ್ ರಾಷ್ಟ್ರೀಯ ಸಂಚಾಲಕ ಮತ್ತು ನನ್ನ ಗುರು ಅರವಿಂದ್ ಕೇಜ್ರಿವಾಲ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ.
ಅವರು ನನ್ನ ಮೇಲೆ ನಂಬಿಕೆ ಇರಿಸಿ ಅಂತಹ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಇದು ಕೇವಲ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿಯಲ್ಲಿ ಮಾತ್ರ ನಡೆಯಲು ಸಾಧ್ಯ. ನಾನು ಸಾಮಾನ್ಯ ಕುಟುಂಬದಿಂದ ಬಂದ ಹೆಣ್ಣಮಗಳಾಗಿದ್ದು, ನನಗೆ ಟಿಕೆಟ್ ನೀಡುವುದೂ ಕೂಡ ಕಷ್ಟಸಾಧ್ಯವಿತ್ತು.
ಆದರೆ ಅರವಿಂದ್ ಕೇಜ್ರಿವಾಲ್ ಅವರು ನನ್ನನ್ನು ನಂಬಿ, ಶಾಸಕಿ, ಸಚಿವೆಯಾಗಿ ಮಾಡಿ ಈಗ ನನಗೆ ಸಿಎಂ ಜವಾಬ್ದಾರಿಯನ್ನು ನೀಡಿದ್ದಾರೆ. ನನ್ನ ಮೇಲೆ ಅರವಿಂದ್ ಕೇಜ್ರಿವಾಲ್ ಅಂತಹ ನಂಬಿಕೆ ಇಟ್ಟಿದ್ದಕ್ಕೆ ನನಗೆ ಸಂತಸವಾಗಿದೆ. ದೆಹಲಿ ಸಿಎಂ ಮತ್ತು ನನ್ನ ಅಣ್ಣ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡುತ್ತಿದ್ದಾರೆ. ದೆಹಲಿಯ ಏಕೈಕ ಮುಖ್ಯಮಂತ್ರಿ ಎಂದರೆ ಅದು ಅರವಿಂದ್ ಕೇಜ್ರಿವಾಲ್ ಮಾತ್ರ ಎಂದು ನಾನು ಇಂದು ಎಲ್ಲಾ ಎಎಪಿ ಶಾಸಕರು ಮತ್ತು ದೆಹಲಿಯ 2 ಕೋಟಿ ಜನರ ಪರವಾಗಿ ನಾನು ಹೇಳಲು ಬಯಸುತ್ತೇನೆ ಎಂದರು.
Advertisement