ದೆಹಲಿಯ ಕರೋಲ್ ಬಾಗ್‌ನಲ್ಲಿ ಮನೆ ಕುಸಿತ: 12 ಮಂದಿ ರಕ್ಷಣೆ, ಹಲವರು ಸಿಲುಕಿರುವ ಶಂಕೆ
ದೆಹಲಿ: ಕೇಂದ್ರ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಮನೆ ಕುಸಿದು ಬಿದ್ದ ಪರಿಣಾಮ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಕನಿಷ್ಠ 12 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರೋಲ್ ಬಾಗ್‌ನ ಪ್ರಶಾದ್ ನಗರದಲ್ಲಿ ಮನೆಯೊಂದು ಕುಸಿದಿರುವ ಬಗ್ಗೆ ಇಲಾಖೆಗೆ ಬೆಳಿಗ್ಗೆ 9.12 ಕ್ಕೆ ಕರೆ ಬಂದಿತು, ನಂತರ ಐದು ಅಗ್ನಿಶಾಮಕ ವಾಹನಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದವು. ಮೂರು ಅಂತಸ್ತಿನ ಹಳೆಯ ಕಟ್ಟಡದ ಕೆಲವು ಭಾಗವು ಬೆಳಿಗ್ಗೆ ಕುಸಿದಿದೆ ಎಂದು ತಿಳಿದುಬಂದಿದೆ. "ಹಲವು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ, ನಂತರ ಅವರನ್ನು ರಕ್ಷಿಸಲಾಗಿದೆ" ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗರ್ಗ್ ಹೇಳಿದ್ದಾರೆ.
ನಾವು ಇಲ್ಲಿಯವರೆಗೆ 12 ಜನರನ್ನು ರಕ್ಷಿಸಿದ್ದೇವೆ, ಇನ್ನೂ ಕೆಲವರು ಸಿಕ್ಕಿಬಿದ್ದಿರುವ ಸಾಧ್ಯತೆಯಿದೆ ಎಂದು ಡಿಸಿಪಿ ಹೇಳಿದರು, ಸ್ಥಳೀಯ ಪೊಲೀಸರು ಮತ್ತು ಇತರ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಎಂ ಹರ್ಷವರ್ಧನ್ ತಿಳಿಸಿದ್ದಾರೆ.
ದೆಹಲಿ ಪೊಲೀಸರು, ದೆಹಲಿ ಅಗ್ನಿಶಾಮಕ ಸೇವೆ (DFS), ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳನ್ನು ಒಳಗೊಂಡಿರುವ ರಕ್ಷಣಾ ತಂಡ ಅವಶೇಷಗಳನ್ನು ತೆರವುಗೊಳಿಸುತ್ತಿವೆ ಮತ್ತು ಅವಶೇಷಗಳಡಿಯಲ್ಲಿ ಸಿಲುಕಿರುವ ಹೆಚ್ಚಿನ ಜನರನ್ನು ರಕ್ಷಿಸಲು ಮುಂದಾಗಿದೆ.
ಕಟ್ಟಡವು ಕಿರಿದಾದ ಮಾರ್ಗಗಳನ್ನು ಹೊಂದಿರುವ ಅತ್ಯಂತ ದಟ್ಟಣೆಯ ಪ್ರದೇಶದಲ್ಲಿದೆ, ಇದು ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚು ಕಷ್ಟಕರವಾಗಿಸಿದೆ ಏಕೆಂದರೆ ಅವಶೇಷಗಳನ್ನು ತೆರವುಗೊಳಿಸಲು ಬಳಸಬಹುದಾದ ಭಾರೀ ಯಂತ್ರಗಳು ಅಥವಾ ಕ್ರೇನ್‌ಗಳು ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ನಾವು ಜನರನ್ನು ರಕ್ಷಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಕಟ್ಟಡದಲ್ಲಿ ಕೆಲವು ಬಾಡಿಗೆದಾರರು ದೆಹಲಿಯಿಂದ ಬಂದವರಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಕಾನೂನು ಕ್ರಮ ತೆಗೆದುಕೊಳ್ಳುವುದು ಎಂದು ತಿಳಿಸಿದ್ದಾರೆ.
ನಿಯೋಜಿತ ಮುಖ್ಯಮಂತ್ರಿ ಅತಿಶಿ ಸಿಂಗ್ ಅವರು ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಮತ್ತು ಘಟನೆಯ ಹಿಂದಿನ ಕಾರಣವನ್ನು ಕಂಡುಹಿಡಿಯುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ