
ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಅಧಿಕೃತ ನಿವಾಸ ಖಾಲಿ ಮಾಡುತ್ತಾರೆ ಮತ್ತು ಭದ್ರತೆ ಸೇರಿದಂತೆ ಅವರಿಗೆ ಒದಗಿಸಿದ ಎಲ್ಲಾ ಸೌಲಭ್ಯಗಳನ್ನು ಬಿಟ್ಟುಕೊಡುತ್ತಾರೆ ಎಂದು ಆಪ್ ಸಂಸದ ಸಂಜಯ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.
ಕೇಜ್ರಿವಾಲ್ ಅವರ ರಾಜೀನಾಮೆಯ ನಂತರ, ಸಂಜಯ್ ಸಿಂಗ್ ಅವರು ಮಾಜಿ ಮುಖ್ಯಮಂತ್ರಿ ಮಾಡುತ್ತಿರುವ ತ್ಯಾಗವನ್ನು ಎತ್ತಿ ತೋರಿಸಿದರು. ಕೇಜ್ರಿವಾಲ್ ಅವರು ತಮಗೆ ನೀಡಲಾಗಿರುವ ಎಲ್ಲಾ ಸೌಲಭ್ಯಗಳನ್ನು ತ್ಯಜಿಸಲು ಯೋಜಿಸುತ್ತಿದ್ದಾರೆ ಎಂದರು.
"ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ಜನ ಭಾರಿ ಬಹುಮತದೊಂದಿಗೆ ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಅವರು ಪ್ರಾಮಾಣಿಕತೆಯಿಂದ ದೆಹಲಿಯ ಜನರ ಸೇವೆ ಸಲ್ಲಿಸಿದ್ದಾರೆ ಎಂದರು.
ಮುಖ್ಯಮಂತ್ರಿಗೆ ಅನೇಕ ಸೌಲಭ್ಯಗಳು ಸಿಗುತ್ತವೆ. ಅರವಿಂದ್ ಕೇಜ್ರಿವಾಲ್ ಅವರಿಗೂ ಆ ಸೌಲಭ್ಯಗಳು ಸಿಕ್ಕಿವೆ. ನಿನ್ನೆ ಅವರು ರಾಜೀನಾಮೆ ನೀಡಿದ ನಂತರ ಈ ಎಲ್ಲಾ ಸೌಲಭ್ಯಗಳನ್ನು ಬಿಟ್ಟುಕೊಡುವುದಾಗಿ ಅವರು ಹೇಳಿದರು. ಒಂದು ವಾರದೊಳಗೆ ತಮ್ಮ ಮನೆಯನ್ನು ಖಾಲಿ ಮಾಡುವುದಾಗಿ ತಿಳಿಸಿದ್ದಾರೆ ಎಂದರು.
ಕೇಜ್ರಿವಾಲ್ ಅವರ ಮೇಲೆ ನಡೆದ ಹಲವು ದಾಳಿಗಳನ್ನು ಉಲ್ಲೇಖಿಸಿದ ಸಂಜಯ್ ಸಿಂಗ್, ಮಾಜಿ ಸಿಎಂ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
"ಅವರ ಭದ್ರತೆಯ ಬಗ್ಗೆಯೂ ಪ್ರಶ್ನೆ ಇದೆ. ಅವರ ಮೇಲೆ ಒಂದಲ್ಲ ಹಲವು ಬಾರಿ ದಾಳಿ ನಡೆದಿದೆ. ನಾವು ಅವರಿಗೆ ಹೇಳಿದ್ದೇವೆ, ನಿಮ್ಮ ಭದ್ರತೆ ಅಪಾಯದಲ್ಲಿದೆ ಎಂದು ವಿವರಿಸಲು ಪ್ರಯತ್ನಿಸಿದ್ದೇವೆ. ಭಾರತೀಯ ಜನತಾ ಪಕ್ಷದ ಜನರು ಅವರ ಮೇಲೆ ದಾಳಿ ಮಾಡಿದ್ದಾರೆ" ಎಂದು ಸಿಂಗ್ ಹೇಳಿದರು.
Advertisement