ಪುಣೆ: ಕೆಲಸದ ಒತ್ತಡದಿಂದ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದು, ಆಕೆಯ ಅಂತ್ಯಕ್ರಿಯೆಗೆ ಆ ಸಂಸ್ಥೆಯ ಅಧಿಕಾರಿಗಳು ಬಾರದೇ ಇರುವ ಕುರಿತು ತಾಯಿಯೊಬ್ಬರು ಬರೆದಿರುವ ಭಾವುಕ ಪತ್ರವೊಂದು ವೈರಲ್ ಆಗುತ್ತಿದೆ.
ಹೌದು.. ಸಂಸ್ಥೆ ನೀಡಿದ ಅತಿಯಾದ ಕೆಲಸದ ಒತ್ತಡದಿಂದಾಗಿ ಮಗಳು ಮೃತಪಟ್ಟಿದ್ದಾರೆ ಎಂದು ತಾಯಿಯೊಬ್ಬರು ಆರೋಪಿಸಿ, ಕಂಪನಿಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ಅನ್ನಾ ಸಬಸ್ಟೆಯನ್ ಪೆರಾಯಿಲ್ (26) ಮೃತ ಉದ್ಯೋಗಿಯಾಗಿದ್ದು, ಇವರು ಪುಣೆಯ ಬಹುರಾಷ್ಟ್ರೀಯ ಕಂಪನಿ Ernst & Young (EY)ಯಲ್ಲಿ ಚಾರ್ಟೆಡ್ ಅಕೌಂಟಂಟ್ ಆಗಿ ನಾಲ್ಕು ತಿಂಗಳ ಹಿಂದಷ್ಟೇ ಉದ್ಯೋಗಕ್ಕೆ ಸೇರಿದ್ದರು. ಆದರೆ ಅತಿಯಾದ ಕೆಲಸದ ಒತ್ತಡದಿಂದಾಗಿ ಆಕೆ ಮೃತಪ್ಟಿದ್ದಾಳೆ ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.
ತಾಯಿ ಭಾವುಕ ಪತ್ರ
ಕಂಪನಿಯ ಮುಖ್ಯಸ್ಥ ರಾಜೀವ್ ಮೆಮಾನಿ ಅವರಿಗೆ ಮಗಳ ಸಾವಿನ ಕುರಿತು ಪತ್ರ ಬರೆದಿರುವ ತಾಯಿ ಅನಿತಾ ಅಗಸ್ಟೀಸ್, ‘ತಮ್ಮ ಮಗಳು ಮೊದಲ ಕೆಲಸ ಎಂದು ಉತ್ಸಾಹದಲ್ಲಿಯೇ ಕಂಪನಿಗೆ ಸೇರಿದ್ದಳು. ಆದರೆ ನಾಲ್ಕು ತಿಂಗಳಲ್ಲಿ ಅತಿಯಾದ ಕೆಲಸದ ಹೊರೆ ತಡೆಯಲಾರದೆ ಮೃತಪಟ್ಟಿದ್ದಾಳೆ. ಪಿಜಿಯಿಂದ ಮನೆಗೆ ಬಂದಾಗಲೆಲ್ಲಾ ಅತಿಯಾದ ಸುಸ್ತಿನಿಂದ ಬಳಲುತ್ತಿದ್ದಳು.
ದಿನಕಳೆದಂತೆ ಆಕೆ ಆತಂಕ, ಒತ್ತಡ, ನಿದ್ರಾಹೀನತೆಗೆ ಒಳಗಾಗಿದ್ದಳು. ಆದರೂ ಕೆಲಸದಲ್ಲಿ ಯಶಸ್ಸು ಕಾಣಬೇಕೆಂದು ಒತ್ತಡವನ್ನು ಸಹಿಸಿ ಕೆಲಸ ಮಾಡುತ್ತಿದ್ದಳು. ಆಕೆಯ ವ್ಯವಸ್ಥಾಪಕರು ಕೂಡ ರಾತ್ರಿ ಕೆಲಸ ನೀಡಿ, ಬೆಳಗಿನೊಳಗೆ ಮುಗಿಸಬೇಕೆಂದು ಗಡುವು ನೀಡುತ್ತಿದ್ದರು. ಹೀಗಾಗಿ ಅನ್ನಾ, ರಾತ್ರಿ ಹಗಲೆನ್ನದೆ ವಾರಾಂತ್ಯದಲ್ಲೂ ಕೆಲಸ ಮಾಡುತ್ತಿದ್ದಳು. ಇದರಿಂದಾಗಿಯೇ ಆಕೆ ಮೃತಪಟ್ಟಿದ್ದಾಳೆ’ ಎಂದು ದೂರಿದ್ದಾರೆ ಎಂದು ವರದಿಯಾಗಿದೆ.
ಜೊತೆಗೆ, ಸಂಪೂರ್ಣ ಮಾಹಿತಿಯನ್ನು ಪತ್ರ ಮುಖೇನ ಕಂಪೆನಿಗೂ ಕಳುಹಿಸಿ, ಇತರ ಉದ್ಯೋಗಿಗಳ ಜೀವ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಅಂತ್ಯಕ್ರಿಯೆಗೂ ಬಾರದ ಸಂಸ್ಥೆ
ಆಘಾತಕಾರಿ ವಿಚಾರವೆಂದರೆ ಯಾವ ಸಂಸ್ಥೆಗಾಗಿ ಅನ್ನಾ ಸಬಸ್ಟೆಯನ್ ಪೆರಾಯಿಲ್ ಹಗಲು-ರಾತ್ರಿ ಎನ್ನದೇ ಸಮಯದ ಪರಿಜ್ಞಾನವೇ ಇಲ್ಲದೇ ಕೆಲಸ ಮಾಡುತ್ತಿದ್ದಳೋ ಅದೇ ಸಂಸ್ಥೆ ಆಕೆಯ ಅಂತ್ಯಕ್ರಿಯೆಗೂ ಬರಲಿಲ್ಲ ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.
ಆಕೆಯ ಅಂತ್ಯಕ್ರಿಯೆಗೆ ಕಂಪೆನಿಯ ಒಬ್ಬರೇ ಒಬ್ಬರು ಅಧಿಕಾರಿಗಳು ಬರಲಿಲ್ಲ. ಕಂಪನಿಗೆ ಸೇರಿದ ದಿನದಿಂದ ಆಕೆಗೆ ವಿಪರೀತ ಕೆಲಸ ನೀಡಲಾಗಿತ್ತು. ಅನ್ನಾ 2023 ರಲ್ಲಿ CA ಪರೀಕ್ಷೆಗಳನ್ನು ಉತ್ತೀರ್ಣರಾಗಿದ್ದರು. ಮಾರ್ಚ್ 2024 ರಲ್ಲಿ EY ಪುಣೆಗೆ ಕಾರ್ಯನಿರ್ವಾಹಕರಾಗಿ ಸೇರಿದರು. ಇದು ಆಕೆಯ ಮೊದಲ ಕೆಲಸವಾಗಿತ್ತು. ಆಕೆಗೂ ಕೆಲಸ ಮಾಡುವ ಉಮೇದು ಇತ್ತು. ಇದನ್ನೇ ಕಂಪೆನಿ ಬಂಡವಾಳ ಮಾಡಿಕೊಂಡಿದೆ. ಆಕೆಗೆ ವಿಪರೀತ ಕೆಲಸ ಕೊಟ್ಟು ಟಾರ್ಗೆಟ್ ನೀಡಲಾಗಿತ್ತು. ಇದರಿಮದ ಮಗಳು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಕುಸಿದು ಹೋಗಿದ್ದಳು ಎಂದು ತಾಯಿ ಹೇಳಿದ್ದಾರೆ.
ಮಗಳು ದಿನವೂ ದಣಿದು ಮನೆಗೆ ಬರುತ್ತಿದ್ದಳು. ಕೆಲವೊಮ್ಮೆ ತನ್ನ ಬಟ್ಟೆಗಳನ್ನು ಬದಲಾಯಿಸದೆ ಹಾಸಿಗೆಯ ಮೇಲೆ ಕುಸಿದು ಬೀಳುತ್ತಿದ್ದಳು. ಟಾರ್ಗೆಟ್ ರೀಚ್ ಆಗಲು ತುಂಬಾ ಶ್ರಮಿಸುತ್ತಿದ್ದಳು. ಅವಳು ಹೋರಾಟಗಾರ್ತಿ, ಸುಲಭವಾಗಿ ಬಿಟ್ಟುಕೊಡುತ್ತಿರಲಿಲ್ಲ. ಕೆಲಸ ಬಿಡುವಂತೆ ಹೇಳಿದರೂ ಕೇಳಲಿಲ್ಲ ಎಂದು ದುಃಖಿತರಾಗಿದ್ದಾರೆ.
ಒತ್ತಡದಿಂದಾಗಿ ಹಲವರ ರಾಜಿನಾಮೆ
ಅಲ್ಲದೆ "ಅತಿಯಾದ ಕೆಲಸದ ಹೊರೆಯಿಂದಾಗಿ ಅನೇಕ ಉದ್ಯೋಗಿಗಳು ರಾಜೀನಾಮೆ ನೀಡಿದ್ದಾರೆ. ಆದರೆ ಮಗಳು ಎಷ್ಟೇ ಕಷ್ಟವಾದರೂ ಕೆಲಸ ಮುಂದುವರೆಸಿದಳು. ಕಂಪೆನಿಯ ಕೆಲಸದ ಜೊತೆ ಆಕೆಗೆ ಇತರ ಕೆಲಸಗಳನ್ನೂ ನೀಡಲಾಗಿತ್ತು. ಇದರಿಂದಾಗಿ ಅನ್ನಾ ತಡರಾತ್ರಿಯವರೆಗೆ ಮತ್ತು ವಾರಾಂತ್ಯದಲ್ಲಿಯೂ ಕೆಲಸ ಮಾಡುತ್ತಿದ್ದಳು. ಒಮ್ಮೆ ತಡರಾತ್ರಿಯವರೆಗೂ ಕೆಲಸ ಮಾಡಿದರೂ ಬೆಳಿಗ್ಗೆ ಬೇಗ ಕರೆಯಲಾಗಿತ್ತು.
ಅವಳಿಗೆ ವಿಶ್ರಾಂತಿ ಅಥವಾ ಚೇತರಿಸಿಕೊಳ್ಳಲು ಯಾವುದೇ ಸಮಯವೇ ಇರಲಿಲ್ಲ. ಈ ಬಗ್ಗೆ ಮಗಳು ಕಂಪೆನಿಯಲ್ಲಿ ಹೇಳಿದಾಗ ವಜಾ ಮಾಡುವುದಾಗಿ ಬೆದರಿಸಿದರು. ಆದ್ದರಿಂದ ಅವಳು ಎಲ್ಲವನ್ನೂ ಸಹಿಸಿಕೊಂಡು ಕೆಲಸ ಮಾಡುತ್ತಿದ್ದಳು ಎಂದು ತಾಯಿ ಮಗಳ ಸಾವಿನ ಕುರಿತು ಹೇಳಿದ್ದಾರೆ.
ಅನ್ನಾ ಸಾವು ಹೇಗಾಯಿತು ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಕಂಪನಿ ಕೂಡ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement