ನವದೆಹಲಿ: ಹಿಂದೂಗಳ ಖ್ಯಾತ ಪವಿತ್ರ ಯಾತ್ರಾತಾಣ ತಿರುಪತಿ-ತಿರುಮಲ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬ ಮಿಶ್ರಣ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆಂಧ್ರ ಪ್ರದೇಶ ಸರ್ಕಾರದಿಂದ ವರದಿ ಕೇಳಿದೆ.
ವೆಂಕಟೇಶ್ವರಸ್ವಾಮಿ ದೇಗುಲದ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂಬ ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಆರೋಪದ ಕುರಿತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ (J.P Nadda) ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಅವರಿಗೆ ವಿವರವಾದ ವರದಿ ಕೇಳಿದ್ದಾರೆ.
ಲಡ್ಡೂಗಳನ್ನು ದೇವಾಲಯಕ್ಕೆ ಭೇಟಿ ನೀಡುವ ಕೋಟಿಗಟ್ಟಲೆ ಭಕ್ತರಿಗೆ ನೀಡಲಾಗುತ್ತದೆ. ಇದರಿಂದಾಗಿ ಸಿಎಂ ಏನೇ ಹೇಳಿದರೂ ಅದು ಗಂಭೀರ ಮತ್ತು ಕಳವಳಕಾರಿ ವಿಷಯವಾಗಿದೆ. ಈ ಆರೋಪದ ವಿರುದ್ಧ ಕೂಲಂಕುಶ ತನಿಖೆ ನಡೆಸುವ ಅಗತ್ಯವಿದೆ. ಅಲ್ಲದೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ನಡ್ಡಾ ಹೇಳಿದ್ದಾರೆ.
"ಲಭ್ಯವಿರುವ ವರದಿಯನ್ನು ಹಂಚಿಕೊಳ್ಳಲು ನಾನು ಅವರನ್ನು ಕೇಳಿದ್ದೇನೆ. ಇದರಿಂದ ನಾನು ಅದನ್ನು ಪರಿಶೀಲಿಸಬಹುದು. ನಾನು ರಾಜ್ಯ ನಿಯಂತ್ರಕರೊಂದಿಗೆ ಮಾತನಾಡಿ ಬಳಿಕ ಈ ಬಗ್ಗೆ ತನಿಖೆ ನಡೆಸುತ್ತೇನೆ. ಆಹಾರ ಸುರಕ್ಷತಾ ಮಾನದಂಡಗಳ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ನಾನು ವರದಿ ಕೇಳಿದ್ದು, ಪರಿಶೀಲಿಸುತ್ತೇವೆ ಎಂದು ಹೇಳಿದರು.
ಈ ಹಿಂದೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು, ಈ ಹಿಂದಿನ ಸಿಎಂ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರು ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದ ಮಾದರಿಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ಗುಜರಾತ್‍ನ ಸರ್ಕಾರಿ ಲ್ಯಾಬ್‍ನ ವರದಿಯನ್ನು ಅವರು ಉಲ್ಲೇಖಿಸಿದ್ದರು.
ತನಿಖೆಗೆ ಜೋಶಿ ಆಗ್ರಹ
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮಾಡಿರುವ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ.
‘ಚಂದ್ರಬಾಬು ನಾಯ್ಡು ಅವರು ಮಾಡಿರುವ ಆರೋಪ ಕಳವಳಕಾರಿ ವಿಷಯವಾಗಿದೆ. ಈ ಕುರಿತು ಸಮಗ್ರ ತನಿಖೆಯ ಅಗತ್ಯವಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.
Advertisement