ಚಂದ್ರಬಾಬು ನಾಯ್ಡು ಒಬ್ಬ ರೋಗಗ್ರಸ್ಥ ಮನಸ್ಥಿತಿಯ ಮಹಾನ್ ಸುಳ್ಳುಗಾರ: ಪ್ರಧಾನಿ ಮೋದಿಗೆ ಪತ್ರ ಬರೆದ ಜಗನ್ ಮೋಹನ್ ರೆಡ್ಡಿ
ವಿಜಯವಾಡ: ತಿರುಪತಿ ತಿಮ್ಮಪ್ಪ ಲಡ್ಡು ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂದಿನ ಸರ್ಕಾರದಲ್ಲಿ ತಿರುಪತಿ ಲಡ್ಡು ಪ್ರಸಾದ ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ ಪಾವಿತ್ರ್ಯತೆ, ಸಮಗ್ರತೆ ಮತ್ತು ಖ್ಯಾತಿಯನ್ನು ಸರಿಪಡಿಸಲಾಗದಂತೆ ಕಳಂಕ ತರುವ ಪ್ರಯತ್ನಗಳನ್ನು ಸಿಎಂ ಚಂದ್ರಬಾಬು ನಾಯ್ಡು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಚಂದ್ರಬಾಬು ನಾಯ್ಡು ಒಬ್ಬ ರೋಗಗ್ರಸ್ಥ ಮತ್ತು ಸುಳ್ಳು ಹೇಳುವುದನ್ನು ಕರಗತ ಮಾಡಿಕೊಂಡಿರುವ ವ್ಯಕ್ತಿ. ಕೋಟ್ಯಂತರ ಜನರ ನಂಬಿಕೆಗಳನ್ನು ಗಂಭೀರವಾಗಿ ಘಾಸಿಗೊಳಿಸುವಷ್ಟು ಕೆಳಮಟ್ಟಕ್ಕಿಳಿದಿದ್ದಾರೆ, ಕೇವಲ ರಾಜಕೀಯ ಉದ್ದೇಶಗಳಿಗಾಗಿ ನಾಯ್ಡು ಅವರು ನಾಚಿಕೆಯಿಲ್ಲದೆ ಸುಳ್ಳನ್ನು ಹೇಳುತ್ತಿದ್ದಾರೆ. ಸತ್ಯವನ್ನು ಹರಡುವ ಕಾರ್ಯವನ್ನು ತೀವ್ರವಾಗಿ ಮಾಡುವುದು ಈಗ ಅನಿವಾರ್ಯವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ತಿರುಪತಿ ಲಡ್ಡು ವಿಚಾರದಲ್ಲಿ ರಾಜಕೀಯ ಮಾಡಲು ಹೊರಟು ಕೋಟ್ಯಂತರ ಹಿಂದೂ ಭಕ್ತರ ಮನಸ್ಸಿನಲ್ಲಿ ಚಂದ್ರಬಾಬು ನಾಯ್ಡು ಅವರು ಅನುಮಾನಗಳನ್ನು ನಿವಾರಿಸಿ ಟಿಟಿಡಿಯ ಪಾವಿತ್ರ್ಯತೆಯ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸಬೇಕು ಎಂದು ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ಮೋದಿಗೆ ಬರೆದ ಪತ್ರವನ್ನು ಒತ್ತಾಯಿಸಿದ್ದಾರೆ.