ಆಗ್ರಾ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಶಾಲೆಯ ಮಾಲಿಕ ಮೌಢ್ಯದ ಅಂಧಕಾರದಲ್ಲಿ 11 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಬೆಚ್ಚಿಬೀಳಿಸುವ ಪ್ರಕರಣ ವರದಿಯಾಗಿದೆ.
ಘಟನೆಗೆ ಕಾರಣರಾದ ಆರೋಪದ ಮೇಲೆ ಶಾಲೆಯ ಮಾಲಿಕ ಮತ್ತು ನಿರ್ದೇಶಕರಲ್ಲದೆ, ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ.
ಎರಡನೆ ತರಗತಿಯ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿತು.
ನಡೆದ ಘಟನೆಯೇನು?: ಹತ್ರಾಸ್ ನಲ್ಲಿ ಡಿಎಲ್ ಪಬ್ಲಿಕ್ ಸ್ಕೂಲ್ ಮಾಲಿಕ ಜಸೋಧನ್ ಸಿಂಗ್ ತಂತ್ರ-ಮಂತ್ರ ಸಂಪ್ರದಾಯ ಆಚರಣೆಯಲ್ಲಿ ನಂಬಿಕೆಯುಳ್ಳವನಾಗಿದ್ದನು. ತನ್ನ ಶಾಲೆ ಇನ್ನಷ್ಟು ಅಭಿವೃದ್ಧಿ ಹೊಂದಲು ಶಾಲೆಯ ಬಾಲಕನೊಬ್ಬನನ್ನು ಬಲಿ ಕೊಟ್ಟರೆ ಒಳ್ಳೆದು ಎಂದು ಮಂತ್ರವಾದಿ ಹೇಳಿದ್ದನು. ಅದರಂತೆ ತನ್ನ ಮಗ ಶಾಲೆಯ ನಿರ್ದೇಶಕ ದಿನೇಶ್ ಬಾಘೇಲ್ ಗೆ ಮಗುವೊಂದನ್ನು ಬಲಿ ಕೊಡಿಸುವಂತೆ ಸೂಚಿಸಿದನು.
ಘಟನೆಗೆ ಸಂಬಂಧಪಟ್ಟಂತೆ ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್ ಮತ್ತು ಇಬ್ಬರು ಶಿಕ್ಷಕರಾದ ರಾಮಪ್ರಕಾಶ್ ಸೋಲಂಕಿ ಮತ್ತು ವೀರಪಾಲ್ ಸಿಂಗ್ ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಐವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 103 (1) ರ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಿದ್ದಾರೆ.
ವಿದ್ಯಾರ್ಥಿಯನ್ನು ಡಿಎಲ್ ಪಬ್ಲಿಕ್ ಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿರುವ 11 ವರ್ಷದ ಕೃತಾರ್ಥ್ ಎಂದು ಗುರುತಿಸಲಾಗಿದೆ ಎಂದು ಹತ್ರಾಸ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಅಶೋಕ್ ಕುಮಾರ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮೊನ್ನೆ ಸೆಪ್ಟೆಂಬರ್ 23 ರಂದು, ಶಿಕ್ಷಕ ರಾಮಪ್ರಕಾಶ್ ಸೋಲಂಕಿ, ದಿನೇಶ್ ಬಾಘೇಲ್ ಮತ್ತು ಶಾಲೆಯ ಮಾಲಿಕ ಜಸೋಧನ್ ಸಿಂಗ್ ಶಾಲೆಯ ಹಾಸ್ಟೆಲ್ ನಿಂದ ವಿದ್ಯಾರ್ಥಿಯನ್ನು ಅಪಹರಿಸಿದ್ದರು. ಜಸೋಧನ್ ಸಿಂಗ್ ಮಂತ್ರತಂತ್ರದಲ್ಲಿ ನಂಬಿಕೆಯುಳ್ಳವನಾಗಿದ್ದ. ಶಾಲೆ ಮತ್ತು ತನ್ನ ಕುಟುಂಬದ ಏಳಿಗೆಗಾಗಿ ಮಗುವನ್ನು ತ್ಯಾಗ ಮಾಡುವಂತೆ ಮಂತ್ರವಾದಿ ಹೇಳಿದ್ದರಿಂದ ಈ ರೀತಿ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಹಾಸ್ಟೆಲ್ ನಲ್ಲಿ ಮಲಗಿದ್ದ ಬಾಲಕನನ್ನು ಅಪಹರಿಸಿದ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ವಿದ್ಯಾರ್ಥಿಯು ಎಚ್ಚರಗೊಂಡು ಅಳಲು ಪ್ರಾರಂಭಿಸಿದ. ನಂತರ ಆತನನ್ನು ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ಮತ್ತೊಬ್ಬ ಶಿಕ್ಷಕ ವೀರಪಾಲ್ ಸಿಂಗ್ ಮತ್ತು ಶಾಲೆಯ ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್ ಕೂಡ ಸ್ಥಳದಲ್ಲಿದ್ದು ಈ ವೇಳೆ ಸ್ಥಳದಲ್ಲಿ ಕಾವಲು ಕಾಯುತ್ತಿದ್ದರು ಎಂದು ತಿಳಿದುಬಂದಿದೆ.
ಕೃತಾರ್ಥ್ ಗೆ ಆರೋಗ್ಯವಿರಲಿಲ್ಲ, ಹೀಗಾಗಿ ಆಸ್ಪತ್ರೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿದ್ದೆವು ಎಂದು ಪೋಷಕರಿಗೆ ಸುಳ್ಳು ಹೇಳಿದ್ದಾರೆ. ಆದರೆ ಪೋಷಕರು ಸಂದೇಹದಿಂದ ದೂರು ನೀಡಿದಾಗ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ತನಿಖೆಯಲ್ಲಿ, ಆರೋಪಿಗಳು ವಿದ್ಯಾರ್ಥಿಯನ್ನು ಶಾಲೆ ಮತ್ತು ಶಾಲೆಯ ಮಾಲಿಕರ ಕುಟುಂಬದ ಏಳಿಗೆಗಾಗಿ ಕೊಂದಿದ್ದಾರೆ ಎಂದು ಎಎಸ್ ಪಿ ತಿಳಿಸಿದ್ದಾರೆ.
Advertisement