ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ನೀಡಿದ್ದ ತನ್ನ ಆದೇಶವನ್ನು ಪೂರ್ಣವಾಗಿ ಅನುಷ್ಟಾನ ಮಾಡದಿದ್ದಕ್ಕಾಗಿ ಶುಕ್ರವಾರ ಕಠಿಣ ಸಂದೇಶ ರವಾನಿಸಿರುವ ಚುನಾವಣಾ ಆಯೋಗ, ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಂದ ವಿವರಣೆ ಕೇಳಿದೆ.
ತವರು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿರುವ ಅಥವಾ ಮೂರು ವರ್ಷ ಪೂರೈಸಿರುವ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಲು ಜುಲೈ 31 ರಂದು ನಿರ್ದೇಶನ ನೀಡಿದ್ದರೂ ರಾಜ್ಯದ ಆಡಳಿತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ ಎಂದು ಚುನಾವಣಾ ಆಯೋಗ ಬರೆದಿರುವ ಪತ್ರದಲ್ಲಿ ತಿಳಿಸಿದೆ.
ಚುನಾವಣಾ ಆಯೋಗದ ಆದೇಶದ ಪ್ರಕಾರ, ನಿರ್ದೇಶನ ಪಾಲನಾ ವರದಿಯನ್ನು ಆಗಸ್ಟ್ 31 ರೊಳಗೆ ನೀಡಬೇಕಾಗಿತ್ತು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಭಾಗಶಃ ವರದಿಯನ್ನು ಸಲ್ಲಿಸಿದ್ದರೂ, ಮುಖ್ಯ ಕಾರ್ಯದರ್ಶಿ ಇನ್ನೂ ಪೂರ್ಣ ಪ್ರತಿಕ್ರಿಯೆಯನ್ನು ನೀಡಿಲ್ಲ.
ಮುಂಬೈನಲ್ಲಿ 100 ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಗಳು ಮತ್ತು ರಾಜ್ಯದ ಪ್ರಮುಖ ಹುದ್ದೆಗಳನ್ನು ಹೊಂದಿರುವ ಕಂದಾಯ ಅಧಿಕಾರಿಗಳನ್ನು ಅಗತ್ಯವಿರುವಂತೆ ವರ್ಗಾವಣೆ ಮಾಡಲಾಗಿಲ್ಲ ಎಂದು ಮೂಲಗಳು ಹೇಳಿವೆ.
ನಿರ್ದೇಶನ ಪಾಲಿಸದ ರಾಜ್ಯ ಆಡಳಿತದ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಳಂಬವು ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಯ ಪ್ರಯತ್ನಗಳನ್ನು ದುರ್ಬಲಗೊಳಿಸಿದೆ ಎಂದು ಅವರು ಹೇಳಿದ್ದಾರೆ.
Advertisement