ರನ್ ವೇ ಮೇಲೆ ಪ್ರಯಾಣಿಕರಿಂದ ಊಟ: ಇಂಡಿಗೋ, ಮುಂಬೈ ವಿಮಾನ ನಿಲ್ದಾಣಕ್ಕೆ BCAS ನೋಟಿಸ್

ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ರನ್‌ ವೇನಲ್ಲಿ ಕುಳಿತು ಊಟ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಇಂಡಿಗೋ ವಿಮಾನ ಮತ್ತು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ನೋಟಿಸ್ ಜಾರಿ ಮಾಡಿದೆ.
ರನ್ ವೇನಲ್ಲಿ ಕುಳಿತಿರುವ ಪ್ರಯಾಣಿಕರು
ರನ್ ವೇನಲ್ಲಿ ಕುಳಿತಿರುವ ಪ್ರಯಾಣಿಕರು

ಮುಂಬೈ: ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ರನ್‌ ವೇನಲ್ಲಿ ಕುಳಿತು ಊಟ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಇಂಡಿಗೋ ವಿಮಾನ ಮತ್ತು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ನೋಟಿಸ್ ಜಾರಿ ಮಾಡಿದೆ.

BCAS ಕೇಂದ್ರ ಸರ್ಕಾರ ನಾಗರಿಕ ವಿಮಾನಯಾನ ಸಚಿವಾಲಯ (ಎಂಒಸಿಎ)ದ ಅಂಗಸಂಸ್ಥೆಯಾಗಿದ್ದು, ಘಟನೆ ಕುರಿತು ಇಂಡಿಗೋ ವಿಮಾನಯಾನ ಸಂಸ್ಥೆ ಮತ್ತು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವರದಿ ಕೇಳಿ ಶೋಕಾಸ್ ನೋಟಿಸ್ ನೀಡಿದೆ. ನೋಟಿಸ್ ಗೆ ಇಂದೇ ಉತ್ತರ ನೀಡುವಂತೆ ಕೇಳಿದೆ. ಘಟನೆ ಸಂಬಂಧ ನಿರ್ದಿಷ್ಟ ಸಮಯದಲ್ಲಿ ಉತ್ತರಗಳನ್ನು ನೀಡದಿದ್ದರೆ, ಆರ್ಥಿಕ ದಂಡ ಸೇರಿದಂತೆ ಕಠಿಣ ಕಾನೂನು ಕ್ರಮ ಜಾರಿ ಮಾಡಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ. 

ಜನವರಿ 16ರಂದು ಸಚಿವಾಲಯ ನೀಡಿರುವ ಅಧಿಕೃತ ಹೇಳಿಕೆಯಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಚಿವಾಲಯದ ಎಲ್ಲ ಅಧಿಕಾರಿಗಳ ಜತೆ ಸಭೆ ನಡೆಸಿ, ವಿಮಾನ ಸಂಚಾರ ವಿಳಂಬದಿಂದ ಉಂಟಾದ ಅವಾಂತರಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ.  ಶೋಕಾಸ್ ನೋಟಿಸ್ ಪ್ರಕಾರ ಇಂಡಿಗೋ ವಿಮಾನ ಮತ್ತು ಮುಂಬೈ ವಿಮಾನ ನಿಲ್ದಾಣ ಎರಡೂ ಕೂಡ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಪ್ರಯಾಣಿಕರಿಗೆ ಸೂಕ್ತವಾದ ಅನುಕೂಲ ವ್ಯವಸ್ಥೆಗಳನ್ನು ನೀಡುವಲ್ಲಿ ವಿಫಲವಾಗಿದೆ. ವಿಶ್ರಾಂತಿ ಕೊಠಡಿಗಳು ಮತ್ತು ಟರ್ಮಿನಲ್‌ನಲ್ಲಿ ಉಪಹಾರ ವ್ಯವಸ್ಥೆಯಂತಹ ಸಾಮಾನ್ಯ ಸೌಲಭ್ಯಗಳನ್ನೂ ಪ್ರಯಾಣಿಕರಿಗೆ ನೀಡಿಲ್ಲ ಎಂದು ಸಚಿವಾಲಯ ಅಸಮಾಧಾನ ಹೊರಹಾಕಿದೆ.

ವಿಮಾನ ನಿಲ್ದಾಣದ ಆಡಳಿತ ಮಂಡಳಿ ಈ ನಡೆಯಿಂದ ಪ್ರಯಾಣಿಕರು ದಣಿದಿದ್ದಲ್ಲದೆ, ಕಿರುಕುಳಕ್ಕೆ ಒಳಗಾಗಿದ್ದಾರೆ. ನಿಜಕ್ಕೂ ಇದು ಸ್ವೀಕಾರಾರ್ಹವಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಭದ್ರತಾ ಮಾನದಂಡಗಳು ಮತ್ತು ಕಾರ್ಯಾಚರಣೆಯ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಆ ರೀತಿ ಮಾಡದೆಯೇ ವಿಮಾನ ಕಾರ್ಯಾಚರಣೆಯನ್ನು ಯೋಜಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ ಎಂದು ಸಚಿವಾಲಯ ಉಲ್ಲೇಖಿಸಿದೆ.

ಏನಾಗಿತ್ತು?
ಕಾರ್ಯಾಚರಣೆಯ ಸಮಸ್ಯೆಯಿಂದಾಗಿ ಗೋವಾದಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವನ್ನು ಮುಂಬೈಗೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ಇದಾದ ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರು ನೆಲದ ಮೇಲೆ ಕುಳಿತು ಆಹಾರ ಸೇವಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಕೇಂದ್ರ ವಿಮಾನಯಾನ ಸಚಿವಾಲಯ ಇಂಡಿಗೋ ವಿಮಾನ ಮತ್ತು ಏರ್‌ಪೋರ್ಟ್‌ ಆಡಳಿತ ಮಂಡಳಿಗೆ ನೋಟಿಸ್‌ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com