
ಲಕ್ನೋ: ಭಾಷೆಯ ಮೇಲಿನ ರಾಜಕೀಯವನ್ನು ಟೀಕಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅದನ್ನು ಮುಂದುವರೆಸುತ್ತಿರುವ ನಾಯಕರು ಇರುವ ರಾಜ್ಯಗಳು ಕ್ರಮೇಣ ಅವನತಿಯತ್ತ ಸಾಗುತ್ತಿವೆ ಮತ್ತು ಅಂತಹ ಸಂಕುಚಿತ ರಾಜಕೀಯವು ಯುವಕರ ಭವಿಷ್ಯಕ್ಕೆ ಹಾನಿ ಮಾಡುತ್ತದೆ ಎಂದಿದ್ದಾರೆ.
ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, 'ಉತ್ತರ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಭಾಷೆಯ ಬಗ್ಗೆ ವಿವಾದ ಸೃಷ್ಟಿಸುವ ಜನರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಸಾಧಿಸಬಹುದು. ಆದರೆ, ಒಂದು ರೀತಿಯಲ್ಲಿ ಯುವಕರಿಗೆ ಉದ್ಯೋಗಾವಕಾಶಗಳಿಗೆ ಹೊಡೆತ ನೀಡುತ್ತಿದ್ದಾರೆ' ಎಂದು ಹೇಳಿದರು.
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಉಲ್ಲೇಖಿಸುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, 'ಅವರು ಯಾರೇ ಆಗಿರಲಿ, ಅವರು ಯುವಕರ ಉದ್ಯೋಗಾವಕಾಶಗಳಿಗೆ ಹೊಡೆತ ನೀಡುತ್ತಿದ್ದಾರೆ. ಆ ರಾಜ್ಯಗಳು ಕ್ರಮೇಣ ಅವನತಿಯತ್ತ ಸಾಗಲು ಇದುವೇ ಕಾರಣ. ಅವರಿಗೆ ಬೇರೆ ಯಾವುದೇ ಸಮಸ್ಯೆಗಳಿಲ್ಲ ಮತ್ತು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಸಾಧಿಸಲು ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ' ಎಂದರು.
ತಮಿಳು, ತೆಲುಗು, ಮಲಯಾಳಂ, ಕನ್ನಡ, ಬಂಗಾಳಿ ಅಥವಾ ಮರಾಠಿಯಂತಹ ಭಾಷೆಗಳು ರಾಷ್ಟ್ರೀಯ ಏಕತೆಯ ಮೂಲಾಧಾರವಾಗಬಹುದು. ಉತ್ತರ ಪ್ರದೇಶ ಸರ್ಕಾರವು ವಿದ್ಯಾರ್ಥಿಗಳಿಗೆ ತಮಿಳು, ತೆಲುಗು, ಮಲಯಾಳಂ, ಕನ್ನಡ, ಬಂಗಾಳಿ ಮತ್ತು ಮರಾಠಿ ಮುಂತಾದ ಭಾಷೆಗಳನ್ನು ಕಲಿಸುತ್ತಿದೆ. ಇದು ಉತ್ತರ ಪ್ರದೇಶವನ್ನು ಯಾವುದೇ ರೀತಿಯಲ್ಲಿ ಕಡಿಮೆ ಮಾಡುತ್ತದೆಯೇ? ಇದು ಯುಪಿಯನ್ನು ಚಿಕ್ಕದಾಗಿ ಕಾಣುವಂತೆ ಮಾಡುತ್ತದೆಯೇ? ಎಂದು ಆದಿತ್ಯನಾಥ್ ಪ್ರಶ್ನಿಸಿದರು.
ಹಿಂದಿ ಭಾಷೆಯನ್ನು ಗೌರವಿಸಬೇಕು ಎಂದು ಎಲ್ಲರೂ ಒಪ್ಪುತ್ತಿದ್ದರೂ, ಭಾರತ ಅಧಿಕೃತವಾಗಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿದೆ. ಈ ತ್ರಿಭಾಷಾ ಸೂತ್ರವು ಪ್ರಾದೇಶಿಕ ಭಾಷೆಗಳಿಗೂ ಅದೇ ಗೌರವವನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ವಿಶೇಷತೆ ಇದ್ದು, ಅದು ರಾಷ್ಟ್ರೀಯ ಏಕತೆಯ ಮೂಲಾಧಾರವಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರತಿಯೊಂದು ಪ್ರಾದೇಶಿಕ ಭಾಷೆಯೂ ತನ್ನದೇ ಆದ ಜಾನಪದ ಸಂಪ್ರದಾಯಗಳು ಮತ್ತು ಕಥೆಗಳನ್ನು ಹೊಂದಿದ್ದು, ಅದು ರಾಷ್ಟ್ರದ ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುತ್ತದೆ ಮತ್ತು ಅದನ್ನು ಬಲಪಡಿಸುತ್ತದೆ. ಕಾಶಿ ತಮಿಳು ಸಂಗಮಮ್ ಕಾರ್ಯಕ್ರಮವು ಭಾರತದ ಅತ್ಯಂತ ಹಳೆಯ ಭಾಷೆಗಳಾದ ತಮಿಳು ಮತ್ತು ಸಂಸ್ಕೃತವನ್ನು ಒಟ್ಟುಗೂಡಿಸುವುದು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದರು.
Advertisement