
ಜೈಪುರ/ಅಮ್ರೋಹಾ: ಈದ್ ಅಲ್ ಫಿತರ್ ಅಂಗವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಮರ ಮೇಲೆ ಹಿಂದೂಗಳು ಪುಷ್ಪವೃಷ್ಟಿಗೈದ ಅಪರೂಪದ ಘಟನೆ ರಾಜಸ್ಥಾನದ ಜೈಪುರ ಹಾಗೂ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಸೋಮವಾರ ನಡೆದಿದೆ.
ರಾಜಸ್ಥಾನದ ದೆಹಲಿ ರಸ್ತೆಯಲ್ಲಿರುವ ಜೈಪುರ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಈದ್ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಂತೆ ಹಿಂದೂ, ಮುಸ್ಲಿಂ ಐಕ್ಯತಾ ಸಮಿತಿಯ ಸದಸ್ಯರು ಅವರ ಮೇಲೆ ಪುಷ್ಪವೃಷ್ಟಿಗೈದು ಶುಭ ಕೋರಿದ್ದಾರೆ. ಈ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್ ಐ ಹಂಚಿಕೊಂಡಿದೆ.
ಮತ್ತೊಂದು ವೀಡಿಯೊದಲ್ಲಿ ಉತ್ತರ ಪ್ರದೇಶದ ಅಮ್ರೋಹಾ ಈದ್ಗಾ ಮೈದಾನದಿಂದ ಹೊರಬರುವ ಮುಸ್ಲಿಮರನ್ನು ಹೂವುಗಳೊಂದಿಗೆ ಹಿಂದೂಗಳು ಹಾಗೂ ಸಿಖ್ಖರು ಸ್ವಾಗತಿಸುತ್ತಿದ್ದಾರೆ. ಕೇಸರಿ ವಸ್ತ್ರಧಾರಿ ವ್ಯಕ್ತಿಯೊಬ್ಬನನ್ನು ವೀಡಿಯೊದಲ್ಲಿ ಕಾಣಬಹುದು.
ಇತ್ತೀಚಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಪ್ರಚೋದನೆ, ಹಿಂಸಾಚಾರ ಹೆಚ್ಚಾಗುತ್ತಿರುವಂತೆಯೇ ಕೋಮು ಸೌಹಾರ್ದತೆ ಮೂಡಿಸುವ ಇಂತಹ ಘಟನೆಗಳು ಅಪರೂಪವಾಗಿದ್ದು, ಗಮನ ಸೆಳೆಯುವಂತಿದೆ.
ಈದ್ ಅಲ್-ಫಿತರ್ ಇಸ್ಲಾಂನಲ್ಲಿ ಉಪವಾಸದ ಪವಿತ್ರ ತಿಂಗಳಾದ ರಂಜಾನ್‌ನ ಮುಕ್ತಾಯವನ್ನು ಸೂಚಿಸುತ್ತದೆ. ಭಾರತದಲ್ಲಿ ಮಾರ್ಚ್ 2 ರಂದು ಆರಂಭವಾಗಿತ್ತು. ಮಾರ್ಚ್ 30 ರಂದು ಭಾನುವಾರ ಚಂದ್ರ ದರ್ಶನದ ನಂತರ ಇದು ಕೊನೆಗೊಂಡಿತು. ರಂಜಾನ್ ಸಮಯದಲ್ಲಿ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ತಿನ್ನುವುದು, ಕುಡಿಯುವುದು ಕೂಡಾ ಇರಲ್ಲ. ಈ ತಿಂಗಳೆಲ್ಲಾ ಈದ್ ವಿಶೇಷ ಪ್ರಾರ್ಥನೆಯಲ್ಲಿಯೇ ಕಳೆಯುತ್ತಾರೆ.
Advertisement