Waqf Amendment Bill ಲೋಕಸಭೆಯಲ್ಲಿ ಮಂಡನೆ: ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ- ಕೇಂದ್ರ ಸರ್ಕಾರ

ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಮಸೂದೆಯನ್ನು ಮಂಡಿಸಿದ್ದು, 1995ರಲ್ಲಿ ಈ ಮಸೂದೆಯನ್ನು ಪರಿಚಯಿಸಿದಾಗ ಯಾರು ವಿರೋಧಿಸಿರಲಿಲ್ಲ. ಈಗ ನಾವು ತಿದ್ದುಪಡಿ ಮಾಡಿದಾಕ್ಷಣ ಅಸಂವಿಧಾನಿಕ ಎಂದು ಅರಚುತ್ತಿದ್ದಾರೆ ಎಂದರು.
ಕಿರಣ್‌ ರಿಜಿಜು
ಕಿರಣ್‌ ರಿಜಿಜು
Updated on

ನವದೆಹಲಿ: ಭಾರೀ ವಿವಾದಕ್ಕೆ ಕಾರಣವಾಗಿರುವ ವಕ್ಫ್ ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆಯಲ್ಲಿ ಮಂಡನೆ ಮಾಡಲಾಗಿದ್ದು, ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರು ಮಸೂದೆಯನ್ನು ಮಂಡಿಸಿದ್ದು, ಈ ಮಸೂದೆಯು ವಕ್ಫ್ ಆಸ್ತಿಗಳ ಆಡಳಿತವನ್ನು ಸುಧಾರಿಸಲು, ತಂತ್ರಜ್ಞಾನ ಆಧಾರಿತ ನಿರ್ವಹಣೆಯನ್ನು ಪರಿಚಯಿಸಲು, ಸಂಕೀರ್ಣತೆಗಳನ್ನು ಪರಿಹರಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ನಡೆಸಿದ ಸಮಾಲೋಚನಾ ಪ್ರಕ್ರಿತೆಯು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಕ್ರಿಯೆಯಾಗಿದೆ.

ಈ ವಿಚಾರವಾಗಿ 25 ರಾಜ್ಯಗಳ ವಕ್ಫ್‌ ಬೋರ್ಡ್‌ಗಳ ಅಭಿಪ್ರಾಯ ಕೇಳಲಾಗಿದೆ. ಮಸೂದೆ ಕುರಿತು 96ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದೇವೆ. 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳ ಜೊತೆಗೆ 284 ನಿಯೋಗಗಳು ಮಸೂದೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿವೆ. ಕಾನೂನು ತಜ್ಞರು, ದತ್ತಿ ಸಂಸ್ಥೆಗಳು, ಶಿಕ್ಷಣ ತಜ್ಞರು ಮತ್ತು ಧಾರ್ಮಿಕ ಮುಖಂಡರು ಸೇರಿದಂತೆ ಇತರರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದಾರೆ. ಈ ಮಸೂದೆ ಬಗ್ಗೆ ನಡೆದಷ್ಟು ಚರ್ಚೆ ಯಾವುದರಲ್ಲಿಯೂ ನಡೆದಿಲ್ಲ. ಸಂಸದೀಯ ಜಂಟಿ ಸಮಿತಿಯಲ್ಲೂ ವಿಧೇಯಕದ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಯಾವುದೇ ಧಾರ್ಮಿಕ ಸಂಸ್ಥೆಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈ ಮಸೂದೆಯು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಆದರೆ, ವಕ್ಫ್ ಆಸ್ತಿಗಳೊಂದಿಗೆ ಮಾತ್ರ ವ್ಯವಹರಿಸುತ್ತದೆ. ಮಸೂದೆಯ ಪ್ರಕಾರ, ಯಾವುದೇ ಕಾನೂನಿನ ಅಡಿಯಲ್ಲಿ ಮುಸ್ಲಿಮರು ರಚಿಸಿದ ಟ್ರಸ್ಟ್‌ಗಳನ್ನು ಇನ್ನು ಮುಂದೆ ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ, ಇದು ಟ್ರಸ್ಟ್‌ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಖಚಿತಪಡಿಸುತ್ತದೆ. ಮುಸ್ಲಿಮರು (ಕನಿಷ್ಠ ಐದು ವರ್ಷಗಳ ಕಾಲ) ಮಾತ್ರ ತಮ್ಮ ಆಸ್ತಿಯನ್ನು ವಕ್ಫ್‌ಗೆ ಅರ್ಪಿಸಬಹುದು, 2013 ರ ಪೂರ್ವದ ನಿಯಮಗಳನ್ನು ಪುನಃಸ್ಥಾಪಿಸಬಹುದು. ಆಸ್ತಿ ವಕ್ಫ್ ಎಂದು ಘೋಷಣೆಯಾಗುವುದಕ್ಕೂ ಮುನ್ನ ವಿಧವೆಯರು, ವಿಚ್ಛೇದಿತ ಮಹಿಳೆಯರು ಹಾಗೂ ಅನಾಥರು ಉತ್ತರಾಧಿಕಾರ ಪಡೆಯಬೇಕು. ವಕ್ಫ್ ಎಂದು ಹೇಳಲಾದ ಸರ್ಕಾರಿ ಆಸ್ತಿಗಳನ್ನು ಕಲೆಕ್ಟರ್ ಹುದ್ದೆಗಿಂತ ಮೇಲಿನ ಅಧಿಕಾರಿಯೊಬ್ಬರು ತನಿಖೆ ನಡೆಸಬೇಕೆಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ವಿವಾದಗಳಿದ್ದಲ್ಲಿ, ಆಸ್ತಿ ವಕ್ಫ್‌ಗೆ ಸೇರಿದೆಯೇ ಅಥವಾ ಸರ್ಕಾರಕ್ಕೆ ಸೇರಿದೆಯೇ ಎಂಬುದರ ಕುರಿತು ಹಿರಿಯ ಸರ್ಕಾರಿ ಅಧಿಕಾರಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ವಕ್ಫ್ ನ್ಯಾಯಮಂಡಳಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಇದು ಬದಲಾಯಿಸುತ್ತದೆ. ಅಲ್ಲದೆ, ಮುಸ್ಲಿಮೇತರ ಸದಸ್ಯರನ್ನು ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಸೇರಿಸಲಾಗುತ್ತದೆ.

ಯುಪಿಎ ಸರ್ಕಾರವು ವಕ್ಫ್ ಕಾನೂನಿನಲ್ಲಿ ಮಾಡಿದ ಬದಲಾವಣೆಗಳು ಇತರ ಕಾನೂನುಗಳಿಗಿಂತ ಹೆಚ್ಚಿನ ಪರಿಣಾಮವನ್ನು ಬೀರಿವೆ, ಆದ್ದರಿಂದ ಹೊಸ ತಿದ್ದುಪಡಿಗಳು ಅಗತ್ಯವಾಗಿವೆ. 1995ರಲ್ಲಿ ಈ ಮಸೂದೆಯನ್ನು ಪರಿಚಯಿಸಿದಾಗ ಯಾರು ವಿರೋಧಿಸಿರಲಿಲ್ಲ. ಈ ಹಿಂದೆಯೂ ಹಲವು ಬಾರಿ ತಿದ್ದುಪಡಿಯಾಗಿದ್ದು ವಿರೋಧಗಳು ಬಂದಿರಲಿಲ್ಲ ಈಗ ನಾವು ತಿದ್ದುಪಡಿ ಮಾಡಿದಾ ಕ್ಷಣ ಅಸಂವಿಧಾನಿಕ ಎಂದು ಅರಚುತ್ತಿದ್ದಾರೆ. ರಾಜಕೀಯ ಉದ್ದೇಶದಿಂದ ಮಸೂದೆ ವಿರೋಧಿಸುತ್ತಿದ್ದಾರೆಂದು ತಿಳಿಸಿದರು.

ಪ್ರಧಾನಿ ಮೋದಿಯವರ ಆಳ್ವಿಕೆಯಲ್ಲಿ ಪರಿಚಯಿಸಲಾಗುತ್ತಿರುವ ಈ ಮಸೂದೆಯನ್ನು ಜನರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಇದು ದೇಶದ ಬಡ ಮುಸ್ಲಿಮರನ್ನು ನೋಡಿಕೊಳ್ಳುತ್ತದೆ. ವಕ್ಫ್ ಮಂಡಳಿಯು ವರ್ಷಗಳಿಂದ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಡವರಿಗೆ ಸೇರಿದ ಆಸ್ತಿಯನ್ನು ಲೂಟಿ ಮಾಡುತ್ತಿರುವ ರೀತಿಯನ್ನು ಕೊನೆಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಮುಖಂಡರು “ಮುಗ್ಧ ಮುಸ್ಲಿಮರನ್ನು” ದಾರಿ ತಪ್ಪಿಸುತ್ತಿದ್ದಾರೆ. ಆ ತಪ್ಪುದಾರಿಯನ್ನು ಬಯಲಿಗೆ ಎಳೆಯುತ್ತೇವೆ. ಸಿಎಎ ಮುಸ್ಲಿಮರ ಪೌರತ್ವ ಸ್ಥಾನಮಾನವನ್ನು ಕಸಿದುಕೊಳ್ಳುತ್ತದೆ ಎಂಬ ನಿರೂಪಣೆಯನ್ನು ವಿಪಕ್ಷ ಸೃಷ್ಟಿಸಿತು, ಆದರೆ, ಅದು ಎಂದಿಗೂ ಆಗಲಿಲ್ಲ. ವಕ್ಫ್​ ಬಿಲ್​ ವಿಚಾರದಲ್ಲೂ ಅದೇ ಸುಳ್ಳು ನಿರೂಪಣೆಯನ್ನು ಹರಿಬಿಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇದಕ್ಕೂ ಮೊದಲು, ತಿದ್ದುಪಡಿ ಮಾಡಿದ ಮಸೂದೆಯಲ್ಲಿ ಹೊಸ ನಿಬಂಧನೆಗಳನ್ನು ಸೇರಿಸಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂಬ ವಿರೋಧ ಪಕ್ಷದ ಆಕ್ಷೇಪಣೆಗಳನ್ನು ಸ್ಪೀಕರ್ ಓಂ ಬಿರ್ಲಾ ತಿರಸ್ಕರಿಸಿದರು.

ಈ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಜೆಪಿಸಿ ನಡೆಸಿದ ದೀರ್ಘ ಸಮಾಲೋಚನೆ ಪ್ರಕ್ರಿಯೆಯ ನಂತರ ಮಸೂದೆಯನ್ನು ಮಂಡಿಸಲಾಗಿದೆ ಎಂದು ಹೇಳಿದರು.

ಮಸೂದೆಯನ್ನು ಆಗಸ್ಟ್ 2024 ರಲ್ಲಿ ಪ್ರಸ್ತಾಪಿಸಲಾಗಿತ್ತು. ನಂತರ, ಸದನವು ಕೋರಿದಂತೆ, ಅದನ್ನು ಜೆಪಿಸಿಗೆ ಉಲ್ಲೇಖಿಸಲಾಯಿತು, ಜೆಪಿಸಿ ಸುದೀರ್ಘ ಸಮಾಲೋಚನೆಗಳನ್ನು ನಡೆಸಿದ್ದು, ಮಸೂದೆಯನ್ನು ಸದನದಲ್ಲಿ ಮಂಡಿಸುವ ಮೊದಲು ಜೆಪಿಸಿ ವರದಿಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿತ್ತು. ಇದು ಪ್ರಜಾಪ್ರಭುತ್ವ ಸಮಿತಿ. ಈ ಸಮಿತಿಯು ಕಾಂಗ್ರೆಸ್ ರಚಿಸಿದ ಸಮಿತಿಯಂತೆ ಕಾರ್ಯನಿರ್ವಹಿಸಲಿಲ್ಲ. ಇದು ಸರಿಯಾದ ಕಾರ್ಯವಿಧಾನ ಮತ್ತು ಸಮಾಲೋಚನೆಗಳನ್ನು ಅನುಸರಿಸಿದೆ ಎಂದು ತಿಳಿಸಿದರು.

ಕಿರಣ್‌ ರಿಜಿಜು
ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಮಂಗಳವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ವಿಧೇಯಕ ಮಂಡನೆ ವಿಷಯವನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ವಿಧೇಯಕದ ಕುರಿತು ಉಭಯ ಸದನದಲ್ಲೂ ತಲಾ 8 ಗಂಟೆಗಳ ಕಾಲ ಚರ್ಚೆಗೆ ಸಮಯ ಕಲ್ಪಿಸುವುದಾಗಿ ಸರ್ಕಾರ ಮಾಹಿತಿ ನೀಡಿತ್ತು.

ಸಭೆಯಲ್ಲಿ ಹಾಜರಿದ್ದ ವಿಪಕ್ಷಗಳ ಸದಸ್ಯರು ಸದಸ್ಯರು 12 ಗಂಟೆಗಳ ಅವಕಾಶಕ್ಕೆ ಮನವಿ ಮಾಡಿದರು. ಆದರೆ, ಬೇಡಿಕೆ ತಿರಸ್ಕರಿಸಿದ ಸರ್ಕಾರ, ಮತ್ತೊಂದು ಮಹತ್ವದ ವಿಷಯವಾದ ಮಣಿಪುರದ ಕುರಿತೂ ಬುಧವಾರ ಚರ್ಚೆಗೆ ಅವಕಾಶ ನೀಡಬೇಕಿದೆ. ಹೀಗಾಗಿ ವಕ್ಸ್ ತಿದ್ದುಪಡಿ ವಿಧೇಯಕದ ಕುರಿತು 8 ಗಂಟೆಗಳ ಚರ್ಚೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿತು. ಹೀಗಾಗಿ ವಿಪಕ್ಷಗಳ ಸದಸ್ಯರು ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ.

ಏನಿದು ವಕ್ಫ್ ಮಸೂದೆ?

1923ರಲ್ಲಿ ಮೊದಲ ಬಾರಿಗೆ ವಕ್ಫ್ ಮಂಡಳಿ ಕಾಯ್ದೆ ಜಾರಿಗೆ ಬಂತು. ಇದಕ್ಕೆ 1995ರಲ್ಲಿ ತಿದ್ದುಪಡಿ ತರಲಾಯಿತು. ಇದರ ಅನ್ವಯ ಯಾವುದೇ ವ್ಯಕ್ತಿ ಧಾರ್ಮಿಕ ಕಾರಣಕ್ಕೆ ದಾನ ಮಾಡಿದ ಆಸ್ತಿ ವಕ್ಫ್ ಆಸ್ತಿ ಎನಿಸಿಕೊಳ್ಳುತ್ತದೆ. 2013ರಲ್ಲಿ ಯುಪಿಎ ಸರಕಾರ ಇದಕ್ಕೆ ಕೊಂಚ ಬದಲಾವಣೆ ತಂದು, ಆಸ್ತಿಯನ್ನು ಭಾರತೀಯ ಪುರಾತತ್ವ ಇಲಾಖೆ ಮತ್ತು ವಕ್ಫ್ ಬೋರ್ಡ್‌ ನಡುವೆ ಹಂಚಿಕೆ ಮಾಡಲು ಯತ್ನಿಸಿತ್ತು. ಈಗ ಕೇಂದ್ರ ಸರಕಾರ ವಕ್ಫ್ ಆಸ್ತಿಯಲ್ಲಿ ಆಗುತ್ತಿರುವ ಅಕ್ರಮವನ್ನು ತಡೆಗಟ್ಟಲು ಇದರ ಪರಿಶೀಲನೆಗೆ ಮುಂದಾಗಿದೆ. 40 ತಿದ್ದುಪಡಿಗಳೊಂದಿಗೆ ಹೊಸ ಮಸೂದೆಯನ್ನು ಕೇಂದ್ರ ಮಂಡಿಸುತ್ತಿದೆ.

ತಿದ್ದುಪಡಿಗೆ ವಿರೋಧವೇಕೆ?

ವಕ್ಫ್ ತಿದ್ದುಪಡಿ ಮಸೂದೆಗೆ ಮುಸ್ಲಿಂ ಸಂಘಟನೆಗಳ ಸಹಿತ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರಿಗೂ ಅವಕಾಶ ಒದಗಿಸುತ್ತಿರುವುದರಿಂದ ಈ ಆಸ್ತಿಗಳನ್ನು ಕಬಳಿಸಿಕೊಳ್ಳಲು ಸರಕಾರ ಮುಂದಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಲ್ಲದೆ ಮಸೂದೆ ಅಂಗೀಕಾರವಾದರೆ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗವಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com