
ನವದೆಹಲಿ: ಭಾರತೀಯ ವಾಯುಪಡೆಯ ತರಬೇತಿ ವೇಳೆ ಮತ್ತೊಂದು ದುರಂತ ಸಂಭವಿಸಿದ್ದು, ತರಬೇತಿ ವೇಳೆ ಪ್ಯಾರಾ ಜಂಪ್ ಟ್ರೈನರ್ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಗ್ರಾದಲ್ಲಿ ಶನಿವಾರ ನಡೆದ "ಡೆಮೊ ಡ್ರಾಪ್" (ತರಬೇತಿ) ಸಮಯದಲ್ಲಿ ಗಾಯಗೊಂಡಿದ್ದ ಭಾರತೀಯ ವಾಯುಪಡೆಯ ಆಕಾಶ್ ಸ್ಕೈಡೈವಿಂಗ್ ತಂಡದ ಪ್ಯಾರಾ ಜಂಪ್ ಬೋಧಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಐಎಎಫ್ ತಿಳಿಸಿದೆ.
ಈ ಬಗ್ಗೆ ಐಎಎಫ್ ಎಕ್ಸ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ತರಬೇತಿ ವೇಳೆ ಗಾಯಗೊಂಡು ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಯುಪಡೆಯ ಅಧಿಕಾರಿಯಾಗಿದ್ದ ಬೋಧಕ ನಿಧನರಾದರು ಎಂದು ತಿಳಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಐಎಎಫ್, "ಆಗ್ರಾದಲ್ಲಿ ಡೆಮೊ ಡ್ರಾಪ್ ಸಮಯದಲ್ಲಿ ಗಾಯಗೊಂಡಿದ್ದ ಐಎಎಫ್‌ನ ಆಕಾಶ್ ಗಂಗಾ ಸ್ಕೈಡೈವಿಂಗ್ ತಂಡದ ಪ್ಯಾರಾ ಜಂಪ್ ಬೋಧಕರೊಬ್ಬರು ಇಂದು ನಿಧನರಾದರು. ಐಎಎಫ್ ನಷ್ಟಕ್ಕೆ ತೀವ್ರ ಶೋಕ ವ್ಯಕ್ತಪಡಿಸುತ್ತದೆ ಮತ್ತು ದುಃಖಿತ ಕುಟುಂಬಕ್ಕೆ ಅತೀವ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಈ ದುಃಖದ ಸಮಯದಲ್ಲಿ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ" ಎಂದು ಐಎಎಫ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
4 ದಿನಗಳಲ್ಲಿ 2ನೇ ಸಾವು
ಇನ್ನು ಆಗ್ರಾದಲ್ಲಿ ನಡೆದ "ಡೆಮೊ ಡ್ರಾಪ್" ತರಬೇತಿ ಸಮಯದಲ್ಲಿ ಗಾಯಗೊಂಡಿದ್ದ ಶಿಕ್ಷಕರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ಗುಜರಾತ್‌ನ ಜಾಮ್‌ನಗರದಲ್ಲಿ ತರಬೇತಿ ಹಾರಾಟದ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾದ ನಂತರ ಜಾಗ್ವಾರ್ ಫೈಟರ್ ಜೆಟ್‌ನ ಪೈಲಟ್ ಬುಧವಾರ ನಿಧನರಾಗಿದ್ದರು. ಆ ಮೂಲಕ ಕೇವಲ 4 ದಿನಗಳ ಅಂತರದಲ್ಲಿ ಇಬ್ಬರು ಐಎಎಫ್ ಸಿಬ್ಬಂದಿ ಸಾವನ್ನಪ್ಪಿದಂತಾಗಿದೆ.
ಬುಧವಾರ ಜಾಮ್‌ನಗರದಲ್ಲಿ ನಡೆದ ತನ್ನ ಟೂ ಸೀಟರ್ ಜಾಗ್ವಾರ್ ವಿಮಾನ ಅಪಘಾತದಲ್ಲಿ ರೇವಾರಿಯ ನಿವಾಸಿ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಸಾವನ್ನಪ್ಪಿದ್ದರು. 28 ವರ್ಷದ ಸಿದ್ಧಾರ್ಥ್ ವಿಮಾನದಲ್ಲಿ ತನ್ನೊಂದಿಗೆ ಇದ್ದ ಸಹ-ಪೈಲಟ್ ನನ್ನು ವಿಮಾನದಿಂದ ಹೊರಹೋಗುವಂತೆ ಆದೇಶಿಸಿ, ಬಳಿಕ ವಿಮಾನ ಜನನಿಬಿಡ ಪ್ರದೇಶಗಳಲ್ಲಿ ಬೀಳದಂತೆ ಎಚ್ಚರಿಕೆ ವಹಿಸಲು ಕೊನೆಯ ಕ್ಷಣದವರೆಗೂ ವಿಮಾನದಲ್ಲೇ ಇದ್ದು ಜೆಟ್ ವಿಮಾನವನ್ನು ದೂರಕ್ಕೆ ತೆಗೆದುಕೊಂಡು ಹೋಗಿ ತಮ್ಮ ಪ್ರಾಣತ್ಯಾಗ ಮಾಡಿದ್ದರು.
ಅಂದಹಾಗೆ ಎರಡು ವರ್ಷಗಳ ಹಿಂದೆ ಯಾದವ್ ಅವರಿಗೆ ಫ್ಲೈಟ್ ಲೆಫ್ಟಿನೆಂಟ್ ಆಗಿ ಬಡ್ತಿ ನೀಡಲಾಗಿತ್ತು. ಮಾರ್ಚ್‌ನಲ್ಲಿ ಅವರ ನಿಶ್ಚಿತಾರ್ಥ ನಡೆದಿದ್ದು, ನವೆಂಬರ್‌ನಲ್ಲಿ ವಿವಾಹವಾಗಲು ನಿರ್ಧರಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಯಾದವ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
Advertisement