
ನವದೆಹಲಿ: ದೇಶದಾದ್ಯಂತ ಶ್ರೀರಾಮನವಮಿ ಸಂಭ್ರಮ ಮನೆ ಮಾಡಿದ್ದು, ಭಕ್ತಿ, ಶ್ರದ್ಧೆ, ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶ್ರೀರಾಮ ಮತ್ತು ಆಂಜನೇಯ ದೇವಸ್ಥಾನಗಳನ್ನು ವಿಶೇಷವಾಗಿ ಸಿಂಗರಿಸಲಾಗಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಅಭಿಷೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಭಕ್ತರು ಬೆಳಗಿನಿಂದಲೇ ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
ರಾಮನವಮಿ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಿರುವ ರಾಮಲಲ್ಲಾನ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರುತ್ತಿದ್ದಾರೆ.
ಬಾಲರಾಮನ ದರ್ಶನ ಪಡೆದು ಭಕ್ತಿಯಲ್ಲಿ ತಲ್ಲೀನರಾಗುತ್ತಿದ್ದಾರೆ. ಇಂದು ಸೂರ್ಯವಂಶಿ ಬಾಲ ರಾಮನ ಹಣೆಯನ್ನು ಸೂರ್ಯರಶ್ಮಿ ಸ್ಪರ್ಶಿಸಲಿದೆ. ಸೂರ್ಯನ ಕಿರಣಗಳು ರಾಮನ ವಿಗ್ರಹದ ಹಣೆಯ ಮೇಲೆ ಬೀಳುತ್ತಿದ್ದಂತೆ ಸೂರ್ಯ ತಿಲಕ ರಚನೆಯಾಗಲಿದೆ. ಈ ಅದ್ಭುತ ದೃಶ್ಯ ಕಣ್ತುಂಬಿಕೊಳ್ಳಲು ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ.
ರಾಮನವಮಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಯೋಧ್ಯೆಯಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆದಿದ್ದ ಮಹಾಕುಂಭ ಮೇಳಕ್ಕೆ ಮಾಡಿದ್ದ ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಭಾರೀ ಸಂಖ್ಯೆಯ ಜನರು ಸೇರಿದ್ದರಿಂದ ಅವರನ್ನು ನಿಯಂತ್ರಿಸಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಬಿಸಿಲ ಝಳ ಹಿನ್ನೆಲೆಯಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ನೆರಳು ನೀಡಲು ಹನುಮಾನ್ ಗಢಿ, ರಾಮ ಮಂದಿರದ ಪ್ರಮುಖ ಸ್ಥಳಗಳಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಭದ್ರತೆ ದೃಷ್ಟಿಯಿಂದ ಅಯೋಧ್ಯೆಯ ವಿವಿಧ ವಲಯಗಳು ಮತ್ತು ವಲಯಗಳಾಗಿ ವಿಂಗಡಿಸಲಾಗಿದೆ. ಯಾತ್ರಾರ್ಥಿಗಳಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ಭಾರೀ ಗಾತ್ರದ ವಾಹನಗಳ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮೂಲಕ ಕಳುಹಿಸಲಾಗುತ್ತದೆ. ಮಹಾಕುಂಭದ ಸಮಯದಲ್ಲಿ ಮಾಡಿದ ವ್ಯವಸ್ಥೆಗಳ ಜಾರಿಗೆ ತರಲಾಗಿದೆ ಎಂದು ಅಯೋಧ್ಯೆಯ ಐಜಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಭದ್ರತೆಗಾಗಿ ಅರೆಸೇನಾ ಪಡೆಗಳು, ಪಿಎಸಿ ಮತ್ತು ಪೊಲೀಸರ ಭದ್ರತೆಗಾಗಿ ನಿಯೋಜಿಸಲಾಗುವುದು. ಈತನ್ಮಧ್ಯೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಸರಯೂ ನದಿಯ ಸುತ್ತಲೂ ಕಣ್ಗಾವಲು ಇರಿಸಲಾಗಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನದವರೆಗೆ ರಾಮ ಮಂದಿರಕ್ಕೆ ಎಲ್ಲಾ ವಿಶೇಷ ಪಾಸ್‌ಗಳ ರದ್ದುಗೊಳಿಸಲಾಗಿದೆ ಮತ್ತು ದೇವಾಲಯ ಭೇಟಿಗಾಗಿ ನಿಯಮಿತ ಯಾತ್ರಿಕರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ರಾಮ ಮಂದಿರಕ್ಕೆ ಆಗಮಿಸುವ ಭಕ್ತರಿಗೆ ಪಾರದರ್ಶಕವಾಗಿರುವ ನೀರಿನ ಬಾಟಲಿಗಳನ್ನು ಕೊಂಡೊಯ್ಯಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತೀರ್ಮಾನ ಕೈಗೊಂಡಿದೆ ಎಂದು ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ. ಈ ದಿನ ಪುಷ್ಯಾ ನಕ್ಷತ್ರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಈ ಬಾರಿ ರಾಮನವಮಿಯನ್ನು ಏಪ್ರಿಲ್ 6 ಭಾನುವಾರದಂದು ಆಚರಿಸಲಾಗುತ್ತಿದೆ.
Advertisement