
ನವದೆಹಲಿ: ರಾಮ ನವಮಿ ಪ್ರಯುಕ್ತ ದೇಶದ ಜನತೆಗೆಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, ಎಲ್ಲರಿಗೂ ರಾಮ ನವಮಿಯ ಶುಭಾಶಯಗಳು. ಶ್ರೀರಾಮನ ಆಶೀರ್ವಾದ ಸದಾ ನಮ್ಮ ಮೇಲಿರಲಿ. ನಮ್ಮ ಎಲ್ಲಾ ಪ್ರಯತ್ನಗಳಲ್ಲಿ ನಮಗೆ ಮಾರ್ಗದರ್ಶನ ನೀಡಲಿ ಎಂದು ಹೇಳಿದ್ದಾರೆ. ಇದೇ ವೇಳೆ ಇಂದು ರಾಮೇಶ್ವರಕ್ಕೆ ಭೇಟಿ ನೀಡುವುದಾಗಿಯೂ ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ದೇಶದ ಜನತೆಗೆ ಶ್ರೀರಾಮನವಮಿ ಹಬ್ಬದ ಶುಭಾಶಯಗಳು. ಈ ಹಬ್ಬವು ಧರ್ಮ, ನ್ಯಾಯ ಮತ್ತು ಕರ್ತವ್ಯ ನಿಷ್ಠೆಯ ಸಂದೇಶವನ್ನು ನೀಡುತ್ತದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನು ಮನುಕುಲಕ್ಕೆ ತ್ಯಾಗ, ಬದ್ಧತೆ, ಸಾಮರಸ್ಯ ಮತ್ತು ಶೌರ್ಯದ ಉನ್ನತ ಆದರ್ಶಗಳನ್ನು ಪ್ರಸ್ತುತಪಡಿಸಿದ್ದಾರೆ. ಅವರ ಉತ್ತಮ ಆಡಳಿತದ ಪರಿಕಲ್ಪನೆ ಅಂದರೆ ರಾಮರಾಜ್ಯವನ್ನು ಆದರ್ಶವೆಂದು ಪರಿಗಣಿಸಲಾಗಿದೆ. ಈ ಶುಭ ಸಂದರ್ಭದಲ್ಲಿ ದೇಶದ ಎಲ್ಲಾ ಜನತೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಒಗ್ಗಟ್ಟಿನಿಂದ ಕೆಲಸ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆಂದು ಹೇಳಿದ್ದಾರೆ.
ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ. ಈ ದಿನ ಪುಷ್ಯಾ ನಕ್ಷತ್ರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ. ಈ ಬಾರಿ ರಾಮನವಮಿಯನ್ನು ಏಪ್ರಿಲ್ 6 ಭಾನುವಾರದಂದು ಆಚರಿಸಲಾಗುತ್ತಿದೆ.
Advertisement