
ಪಾಟ್ನಾ: ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮಾಜಿ ಐಪಿಎಸ್ ಅಧಿಕಾರಿ ಶಿವದೀಪ್ ವಾಮನ್‌ರಾವ್ ಲಾಂಡೆ ಅವರು ಮಂಗಳವಾರ 'ಹಿಂದ್ ಸೇನಾ' ಎಂಬ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ.
ಬಿಹಾರ ಕೇಡರ್‌ನ 2006 ಬ್ಯಾಚ್ ಐಪಿಎಸ್ ಅಧಿಕಾರಿ ಲಾಂಡೆ, ತಮ್ಮ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದಾರೆ. ಆದರೆ ಹೊಸದಾಗಿ ಹುಟ್ಟುಹಾಕಿದ ತಮ್ಮ ರಾಜಕೀಯ ಪಕ್ಷವು ಚುನಾವಣೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.
'ಹಿಂದ್ ಸೇನಾ' ರಾಷ್ಟ್ರೀಯತೆ, ಸಾಮಾಜಿಕ ಸೇವೆ ಮತ್ತು ಭಕ್ತಿಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.
"ನಮ್ಮ ಪಕ್ಷವು 'ಜನತಾ ಕಿ ಆವಾಜ್'(ಜನರ ಧ್ವನಿ) ಆಗಲು ಪ್ರಯತ್ನಿಸುತ್ತದೆ" ಎಂದು ಲ್ಯಾಂಡೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೆಪ್ಟೆಂಬರ್ 22, 2024 ರಂದು ಪೂರ್ಣಿಯಾದಲ್ಲಿ ಐಜಿಯಾಗಿ ನೇಮಕಗೊಂಡಾಗ ಲ್ಯಾಂಡೆ ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದರು ಮತ್ತು ಬಿಹಾರದಲ್ಲಿಯೇ ಉಳಿದು ಇಲ್ಲಿನ ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುವುದಾಗಿಯೂ ತಿಳಿಸಿದ್ದರು.
ಅಂದಿನಿಂದ, ಮಹಾರಾಷ್ಟ್ರದಲ್ಲಿ ಜನಿಸಿದ ಈ ಐಪಿಎಸ್ ಅಧಿಕಾರಿ, ಬಿಹಾರದಲ್ಲಿ ಶೀಘ್ರದಲ್ಲೇ ರಾಜಕೀಯ ಪ್ರವೇಶಿಸುತ್ತಾರೆಯೇ ಎಂಬ ಊಹಾಪೋಹಗಳಿದ್ದವು. ಇಂದು ಹೊಸ ರಾಜಕೀಯ ಪಕ್ಷ ಘೋಷಿಸುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ನೇರ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂದು ಕರೆಯಲ್ಪಡುವ ಲಾಂಡೆ, ಪಾಟ್ನಾದಲ್ಲಿ ನಗರ ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಹೆಚ್ಚು ಖ್ಯಾತಿ ಗಳಿಸಿದ್ದರು.
Advertisement