
ನವದೆಹಲಿ: ದೆಹಲಿಯಿಂದ ಬ್ಯಾಂಕಾಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯ ಪ್ರಜೆಯೊಬ್ಬ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಬುಧವಾರ ವರದಿಯಾಗಿದೆ.
ದೆಹಲಿಯಿಂದ ಬ್ಯಾಂಕಾಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಸಂಖ್ಯೆ AI2336 ನಲ್ಲಿ ಈ ಘಟನೆ ವರದಿಯಾಗಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ತನಿಖೆಗೆ ಆದೇಶಿಸಿದೆ. ಮೂಲಗಳ ಪ್ರಕಾರ AI 2336 ವಿಮಾನದಲ್ಲಿದ್ದ ಪ್ರಯಾಣಿಕನೋರ್ವ ಕುಡಿದ ಮತ್ತಿನಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಈ ವಿಷಯವನ್ನು ಅಧಿಕಾರಿಗಳಿಗೆ ವರದಿ ಮಾಡಲಾಗಿದ್ದು, ಏರ್ ಇಂಡಿಯಾ ಬ್ಯಾಂಕಾಕ್‌ನಲ್ಲಿ "ಸಂತ್ರಸ್ಥ ಪ್ರಯಾಣಿಕ"ನಿಗೆ ಸಹಾಯ ಮಾಡಲು ಮುಂದಾಗಿದೆ. ಅಂತೆಯೇ ಈ ಬಗ್ಗೆ ಏರ್ ಇಂಡಿಯಾ ವಿಮಾನಯಾನ ಕಂಪನಿಯು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ವರದಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸೂಕ್ತ ಕ್ರಮ ಎಂದ ಸಚಿವ
ಈ ಪ್ರಕರಣ ಕುರಿತು ವಿಮಾನಯಾನ ಕಂಪನಿ ಜೊತೆಗೆ ಸಚಿವಾಲಯವು ಚರ್ಚಿಸಲಿದೆ. ಕೃತ್ಯ ಎಸಗಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ತಿಳಿಸಿದ್ದಾರೆ. "ಈ ರೀತಿಯ ಘಟನೆಗಳು ಸಂಭವಿಸಿದಾಗಲೆಲ್ಲಾ, ಸಚಿವಾಲಯವು ಅವುಗಳನ್ನು ಗಮನಿಸುತ್ತದೆ. ಅವರು ವಿಮಾನಯಾನ ಸಂಸ್ಥೆಯೊಂದಿಗೆ ಮಾತನಾಡುತ್ತಾರೆ ಮತ್ತು ಯಾವುದೇ ತಪ್ಪು ನಡೆದಿದ್ದರೆ, ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಅಶಿಸ್ತಿನ ಪ್ರಯಾಣಿಕನ ವಿರುದ್ಧ ಕಠಿಣ ಕ್ರಮ
ಇದೇ ವೇಳೆ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಶಿಸ್ತಿನಿಂದ ವರ್ತಿಸಿದ ಪ್ರಯಾಣಿಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಏರ್ ಇಂಡಿಯಾ ಸಂಸ್ಥೆ ಘೋಷಣೆ ಮಾಡಿದೆ. ಅಲ್ಲದೆ ಘಟನೆಯನ್ನು ನಿರ್ಣಯಿಸಲು ಮತ್ತು ಅಶಿಸ್ತಿನ ಪ್ರಯಾಣಿಕನ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮವನ್ನು ನಿರ್ಧರಿಸಲು ಸ್ಥಾಯಿ ಸ್ವತಂತ್ರ ಸಮಿತಿಯನ್ನು ಕರೆಯಲಾಗುವುದು. ಅಂತಹ ವಿಷಯಗಳಲ್ಲಿ ಡಿಜಿಸಿಎ ನಿಗದಿಪಡಿಸಿದ ಎಸ್‌ಒಪಿಗಳನ್ನು ಏರ್ ಇಂಡಿಯಾ ಅನುಸರಿಸುವುದನ್ನು ಮುಂದುವರೆಸಿದೆ" ಎಂದು ಏರ್ ಇಂಡಿಯಾ ಹೇಳಿದೆ.
ಇದೇ ಮೊದಲೇನಲ್ಲ..
ಇನ್ನು ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು ಇದೇ ಮೊದಲೇನಲ್ಲ.. ಈ ಹಿಂದೆ ಮದ್ಯ ಸೇವಿಸಿದ ನಂತರ ಪ್ರಯಾಣಿಕರು ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಅನೇಕ ಘಟನೆಗಳು ಕಳೆದ ಎರಡು ವರ್ಷಗಳಲ್ಲಿ ವರದಿಯಾಗಿವೆ. ಮಾರ್ಚ್ 2023 ರಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಅಮೆರಿಕದ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿ ಆರ್ಯ ವೋಹ್ರಾ ಅವರನ್ನು ಅಮೆರಿಕನ್ ಏರ್ಲೈನ್ಸ್ ನಿಷೇಧಿಸಿತ್ತು. ಬಳಿಕ ನವೆಂಬರ್ 2024 ರಲ್ಲಿ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ವೃದ್ಧ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಎದುರಿಸಿದ್ದ, ಆತನನ್ನೂ ಭವಿಷ್ಯದ ವಿಮಾನ ಸೇವೆಗಳಿಂದ ನಿಷೇಧಿಸಲಾಗಿತ್ತು.
Advertisement