
ಪುಣೆ: ಬ್ರಾಹ್ಮಣ ಸಮುದಾಯದ ಜನರನ್ನು ತಪ್ಪಾಗಿ ತೋರಿಸಲಾಗಿದೆ ಎಂಬ ವಿವಾದದ ನಡುವೆ ಸಮಾಜ ಸುಧಾರಕ ಮಹಾತ್ಮ ಜ್ಯೋತಿಭಾ ಪುಲೆ ಅವರ ಜೀವನಾಧಾರಿತ 'ಫುಲೆ' ಚಿತ್ರಕ್ಕೆ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಅಥವಾ ಬದಲಾಯಿಸದೆ ಬಿಡುಗಡೆ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಒತ್ತಾಯಿಸಿದ್ದಾರೆ.
ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವುದು ದಲಿತರು ಮತ್ತು ಫುಲೆ ಅವರನ್ನು ತಮ್ಮ ಬದುಕಿನ ಸ್ಪೂರ್ತಿ ಎಂದು ಪರಿಗಣಿಸುವ ಜನರನ್ನು ಅವಮಾನಿಸಿದಂತಾಗುತ್ತದೆ ಎಂದು ಆರೋಪಿಸಿದರು.
ಏಪ್ರಿಲ್ 10 ರಂದು ಆನ್‌ಲೈನ್‌ನಲ್ಲಿ ಚಲನಚಿತ್ರ ಟ್ರೇಲರ್ ಬಿಡುಗಡೆಯಾಗಿದ್ದು, ತಮ್ಮ ಸಮುದಾಯವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಕೆಲ ಬ್ರಾಹ್ಮಣ ಸಮುದಾಯದ ಗುಂಪುಗಳಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಜ್ಯೋತಿಬಾ ಫುಲೆ ಮತ್ತು ಅವರ ಪತ್ನಿ ಸಾವಿತ್ರಿಬಾಯಿ ಅವರ ಜೀವನಾಧಾರಿತ ‘ಫುಲೆ’ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಪುಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ಇದು ದಲಿತರು, ದುರ್ಬಲರು ಮತ್ತು ಫುಲೆಯಿಂದ ಸ್ಫೂರ್ತಿ ಪಡೆದ ಎಲ್ಲರಿಗೂ ಅವಮಾನವಾಗಿದೆ" ಎಂದು ಹೇಳಿದರು. ಯಾವುದೇ ಹಸ್ತಕ್ಷೇಪ ಮತ್ತು ದೃಶ್ಯಕ್ಕೆ ಕತ್ತರಿ ಹಾಕದೆ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಎರಡು ನಿಮಿಷದ ಟ್ರೈಲರ್ ನಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಾರ್ಹ ದೃಶ್ಯಗಳಿಲ್ಲ ಎಂದು ನಿರ್ದೇಶಕ ಅನಂತ್ ಮಹದೇವನ್ ಹೇಳಿದ್ದಾರೆ. ಈ ಬಯೋಪಿಕ್ ಏಪ್ರಿಲ್ 25 ರಂದು ತೆರೆಗೆ ಬರಲಿದೆ.
ಈ ಮಧ್ಯೆ ವಕ್ಫ್ (ತಿದ್ದುಪಡಿ) ಮಸೂದೆ 2025 ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಸಿಂಗ್, ಇದು ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಕಬಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಇದು ಆರಂಭವಷ್ಟೇ. ಅಯೋಧ್ಯೆಯಲ್ಲಿ ರಕ್ಷಣಾ ಭೂಮಿಯನ್ನು ಅದಾನಿಗೆ ಬಿಟ್ಟುಕೊಟ್ಟರು. ವಕ್ಫ್ ಬೋರ್ಡ್ ನಂತರ ಪ್ರಧಾನ ಮಂತ್ರಿಯ ಬಂಡವಾಳಶಾಹಿ ಸ್ನೇಹಿತರಿಗೆ ಲಾಭ ಮಾಡಿಕೊಳ್ಳಲು ಗುರುದ್ವಾರಗಳು, ಚರ್ಚ್‌ಗಳು ಮತ್ತು ದೇವಾಲಯಗಳಿಗೆ ಸೇರಿದ ಭೂಮಿ ಮೇಲೆ ಕಣ್ಣು ಹಾಕುತ್ತಾರೆ ಎಂದು ಹೇಳಿದರು.
Advertisement