
ಬಲಂಗೀರ್: ಒಡಿಶಾದ ಮಾಜಿ ಸಿಎಂ ಬಿಜು ಪಟ್ನಾಯಕ್ ಅವರ ಪ್ರತಿಮೆಗೆ ಬೆಂಕಿ ಹಚ್ಚಲಾಗಿದೆ. ಪಟ್ನಾಗಢ್ ಮಾಜಿ ಶಾಸಕ ಸರೋಜ್ ಕುಮಾರ್ ಮೆಹರ್ ಸ್ಥಾಪಿಸಿದ್ದ ಪ್ರತಿಮೆಗೆ
ಬೆಳಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ಹಚ್ಚಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಬೆಂಕಿ ನಂದಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬತರ್ಲಾ ಗ್ರಾಮದ ನಿವಾಸಿ ಜುಗಲ್ ಕಿಶೋರ್ ಸಾಹು ಎಂಬಾತನನ್ನು ಬಂಧಿಸಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪಟ್ನಾಗಢ್ ಎಸ್‌ಡಿಪಿಒ ಸದಾನಂದ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಾಹು ಇದನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆದರೆ ಆತ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಇದುವರೆಗೆ ನಡೆದ ತನಿಖೆಯಲ್ಲಿ ಘಟನೆಯ ಹಿಂದೆ ಯಾವುದೇ ರಾಜಕೀಯ ಸಂಬಂಧ ಕಂಡುಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಈ ಮಧ್ಯೆ ಬಿಜು ಜನತಾ ದಳ ಘಟನೆಯನ್ನು ತೀವ್ರವಾಗಿ ಖಂಡಿಸುವುದರೊಂದಿಗೆ ವಿಷಯವು ರಾಜಕೀಯ ತಿರುವು ಪಡೆದುಕೊಂಡಿತು. ಮಾಜಿ ಶಾಸಕ ಸಂಜಯ್ ದಾಸ್ ಬರ್ಮಾ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಬಿಜು ಪಟ್ನಾಯಕ್‌ಗೆ ಅಗೌರವದ ಘಟನೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.
ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಬಿಜೆಡಿ ಆಗ್ರಹಿಸಿದೆ. ಸಂಜೆ ಭುವನೇಶ್ವರ ವಿಮಾನ ನಿಲ್ದಾಣದ ಬಳಿಯ ಬಿಜು ಪಟ್ನಾಯಕ್ ಅವರ ಪ್ರತಿಮೆ ಬಳಿ ಧರಣಿ ನಡೆಸಲು ಪಕ್ಷ ಯೋಜಿಸಿದೆ.
ಮೆಹರ್ ಅವರು ಶಾಸಕರಾಗಿದ್ದಾಗ ಪ್ರತಿಮೆ ಪ್ರತಿಷ್ಠಾಪಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬ್ರಾಹ್ಮಣ ಸಮಾಜವು ಸ್ಥಳದಲ್ಲಿ ಪರಶುರಾಮನ ಪ್ರತಿಮೆಯನ್ನು ಸ್ಥಾಪಿಸುವಂತೆ ಒತ್ತಾಯಿಸಿತ್ತು. ಪಟ್ನಾಗಢ್ ನ ಕಾರ್ಯನಿರ್ವಾಹಕ ಅಧಿಕಾರಿಯು ಅದನ್ನು ನಾಗರಿಕ ಸಂಸ್ಥೆಯಿಂದ ಸ್ಥಾಪಿಸಲಾಗಿಲ್ಲ ಎಂದು ಹೇಳಿಕೆ ನೀಡಿದ್ದರು.
ಬ್ರಾಹ್ಮಣ ಸಮಾಜದ ಸದಸ್ಯರು ಸುಮಾರು ಒಂದು ತಿಂಗಳ ಕಾಲ ಧರಣಿ ನಡೆಸಿದ್ದರು ಮತ್ತು ಆ ಅವಧಿಯಲ್ಲಿ ಸರಣಿ ಬಂದ್ ನಡೆಸಲಾಗಿತ್ತು. ಈ ವಿಷಯವು ನಂತರ ಒರಿಸ್ಸಾ ಹೈಕೋರ್ಟ್‌ಗೆ ಅಂಗಳಕ್ಕೆ ತಲುಪಿತ್ತು. ಪ್ರತಿಮೆಯನ್ನು ಪಾಲಿಥಿನ್ ಹಾಳೆಯಲ್ಲಿ ಮುಚ್ಚಲು ಆದೇಶಿಸಿತ್ತು.
Advertisement