ಪಹಲ್ಗಾಮ್ ಉಗ್ರರ ದಾಳಿ: ರಾಷ್ಟ್ರೀಯ ತನಿಖಾ ದಳ ಅಖಾಡಕ್ಕೆ; ಬೇಟೆ ಶುರು..!

ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾಗೆ ಸಂಬಂಧಿಸಿದ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ಎನ್ಐಎ ತನಿಖೆಗೆ ವಹಿಸಿದ್ದು, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆಂದು ತಿಳಿದುಬಂದಿದೆ.

ಎಪ್ರಿಲ್ 22ರಂದು ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರ ದಾಳಿಗೆ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು. ದಾಳಿಯಲ್ಲಿ ಒಬ್ಬ ನೇಪಾಳಿ ಪ್ರಜೆ ಸೇರಿದಂತೆ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಅಲ್ಲದೆ, 36ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾಗೆ ಸಂಬಂಧಿಸಿದ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಗೃಹ ಸಚಿವಾಲಯದ ಭಯೋತ್ಪಾದನಾ ನಿಗ್ರಹ ಮತ್ತು ಪ್ರತಿ-ಆಮೂಲಾಗ್ರೀಕರಣ (CTCR) ವಿಭಾಗವು ತನಿಖೆಯನ್ನು ಎನ್ಐಗೆ ವಹಿಸಿದ್ದು, ಹೊಸ ಎಪ್ಐಆರ್'ನ್ನೂ ಕೂಡ ದಾಖಲಿಸಿದೆ.

ಇಪ್ಪತ್ತು ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಾಗರೀಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿ ಇದಾಗಿದೆ ಎನ್ನಲಾಗುತ್ತಿದ್ದು, ಘಟನೆ ನಡೆದ ಐದು ದಿನಗಳ ಬಳಿಕ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಲಾಗಿದೆ. ಇನ್ನು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎನ್ಐಎ, ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದವರ ಹೇಳಿಕೆಗಳನ್ನು ದಾಖಲಿಸಿದೆ.

ಉಪ ಇನ್ಸ್‌ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ನೇತೃತ್ವದ NIA ತಂಡವು ದಾಳಿಯ ಮರುದಿನ ಏಪ್ರಿಲ್ 23 ರಂದು ಬೈಸರನ್‌ಗೆ ಭೇಟಿ ನೀಡಿತ್ತು.

ಹಲವು ವರ್ಷಗಳ ನಂತರ ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಸಮಯದಲ್ಲಿ ಈ ದಾಳಿ ನಡೆದಿದೆ.

ಸಂಗ್ರಹ ಚಿತ್ರ
ಪಹಲ್ಗಾಮ್ ದಾಳಿ: 7ನೇ ಶಂಕಿತ ಭಯೋತ್ಪಾದಕನ ಮನೆ ಧ್ವಂಸ; ಸೇನೆ ಕಾರ್ಯಾಚರಣೆ ಮುಂದುವರಿಕೆ; ನೂರಾರು ಮಂದಿ ಬಂಧನ

ಈ ನಡುವೆ ಗುಪ್ತಚರ ಸಂಸ್ಥೆಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ 14 ಸ್ಥಳೀಯ ಭಯೋತ್ಪಾದಕರ ಪಟ್ಟಿಯನ್ನು ಸಂಗ್ರಹಿಸುತ್ತಿದ್ದು, ಇದರ ನಡುವಲ್ಲೇ ಎನ್ಐಎ ತನಿಖೆ ಆರಂಭವಾಗಿದೆ.

ಪ್ರಸ್ತುತ ಗುರ್ತಿಸಲಾಗಿರುವ ಭಯೋತ್ಪಾದಕರು, ಪಾಕಿಸ್ತಾನದ ವಿದೇಶಿ ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದು, ಸಕ್ರಿಯವಾಗಿ ಸಹಾಯ ಮಾಡುತ್ತಿದ್ದಾರೆಂದು ತಿಳಿದುಬದಿದೆ.

ಈ ಉಗ್ರರು, ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್-ಇ-ತೊಯ್ಬಾ (LeT), ಮತ್ತು ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂದು ತಿಳಿದುಬಂದಿದೆ,

14 ಮಂದಿ ಉಗ್ರರನ್ನು ಆದಿಲ್ ರೆಹಮಾನ್ ಡೆಂಟೂ (21), ಆಸಿಫ್ ಅಹ್ಮದ್ ಶೇಖ್ (28), ಅಹ್ಸಾನ್ ಅಹ್ಮದ್ ಶೇಖ್ (23), ಹ್ಯಾರಿಸ್ ನಜೀರ್ (20), ಆಮಿರ್ ನಜೀರ್ ವಾನಿ (20), ಯಾವರ್ ಅಹ್ಮದ್ ಭಟ್, ಆಸಿಫ್ ಅಹ್ಮದ್ ಖಾಂಡೇ (24), ನಾಸೀರ್ ಅಹ್ಮದ್ ವಾನಿ (21), ಶಾಹಿದ್ ಅಹ್ಮದ್ ಕುಟೈ (27), ಆಮಿರ್ ಅಹ್ಮದ್ ದಾರ್, ಅದ್ನಾನ್ ಸಫಿ ದಾರ್, ಜುಬೈರ್ ಅಹ್ಮದ್ ವಾನಿ (39), ಹರೂನ್ ರಶೀದ್ ಗನೈ (32), ಮತ್ತು ಜಾಕಿರ್ ಅಹ್ಮದ್ ಗನಿ (29) ಎಂದು ಗುರ್ತಿಸಲಾಗಿದೆ.

ಆದಿಲ್ ರೆಹಮಾನ್ ಡೆಂಟೂ 2021 ರಲ್ಲಿ ಎಲ್‌ಇಟಿಗೆ ಸೇರಿದ್ದು, ಸೋಪೋರ್ ಜಿಲ್ಲಾ ಕಮಾಂಡರ್ ಆಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾನೆಂದು ತಿಳಿದುಬಂದಿದೆ.

ಜೆಇಎಂನ ಭಯೋತ್ಪಾದಕ ಆಸಿಫ್ ಅಹ್ಮದ್ ಶೇಖ್ ಅವಂತಿಪೋರಾದ ಜಿಲ್ಲಾ ಕಮಾಂಡರ್ ಆಗಿದ್ದು, 2022 ರಿಂದ ನಿರಂತರವಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಅಹ್ಸಾನ್ ಅಹ್ಮದ್ ಶೇಖ್ ಪುಲ್ವಾಮಾದಲ್ಲಿ ಎಲ್‌ಇಟಿ ಭಯೋತ್ಪಾದಕನಾಗಿ ಸಕ್ರಿಯನಾಗಿದ್ದು, 2023 ರಿಂದ ನಿರಂತರವಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಹ್ಯಾರಿಸ್ ನಜೀರ್ ಪುಲ್ವಾಮಾದ ಭಯೋತ್ಪಾದಕ ಮತ್ತು 2023 ರಿಂದ ಎಲ್‌ಇಟಿಯಲ್ಲಿ ಸಕ್ರಿಯನಾಗಿದ್ದಾನೆ, ಆಮಿರ್ ನಜೀರ್ ವಾನಿ ಕೂಡ 2024 ರಿಂದ ಪುಲ್ವಾಮಾದಲ್ಲಿ ಸಕ್ರಿಯ ಭಯೋತ್ಪಾದಕನಾಗಿದ್ದಾನೆ. ಯಾವರ್ ಅಹ್ಮದ್ ಭಟ್ ಕೂಡ ಪುಲ್ವಾಮಾದಲ್ಲಿ ಸಕ್ರಿಯನಾಗಿದ್ದು, 2024 ರಿಂದ ಜೆಇಎಂ ಜೊತೆ ನಂಟು ಹೊಂದಿದ್ದಾನೆ.

ಆಸಿಫ್ ಅಹ್ಮದ್ ಖಾಂಡೇ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಭಯೋತ್ಪಾದಕನಾಗಿದ್ದು, ಜುಲೈ 2015 ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾನೆ. ಪ್ರಸ್ತುತ ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುವ ಭಯೋತ್ಪಾದಕ ಗುಂಪಿನ ಸಕ್ರಿಯ ಸದಸ್ಯನಾಗಿದ್ದಾನೆ.

ಸಂಗ್ರಹ ಚಿತ್ರ
ಪಹಲ್ಗಾಮ್ ಭಯೋತ್ಪಾದಕ ದಾಳಿ: ಜಮ್ಮುವಿನ ಕುಲ್ಗಾಮ್, ಶೋಪಿಯಾನ್ ನಲ್ಲಿ ಶಂಕಿತ ಉಗ್ರರ ಮನೆ ಧ್ವಂಸ; Video

ನಸೀರ್ ಅಹ್ಮದ್ ವಾನಿ 2019 ರಿಂದ ಶೋಪಿಯಾನ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ, ಶಾಹಿದ್ ಅಹ್ಮದ್ ಕುಟೈ, 2023 ರಿಂದ ಎಲ್‌ಇಟಿ ಮತ್ತು ಅದರ ಪ್ರಾಕ್ಸಿ ಗುಂಪು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನೊಂದಿಗೆ ಸಂಪರ್ಕ ಹೊಂದಿದ್ದಾನೆ.

2023 ರಿಂದ ಶೋಪಿಯಾನ್‌ನಲ್ಲಿ ಸಕ್ರಿಯವಾಗಿರುವ ಅಮೀರ್ ಅಹ್ಮದ್ ದಾರ್, ಎಲ್‌ಇಟಿ ಜೊತೆ ಕೆಲಸ ಮಾಡುತ್ತಿದ್ದಾನೆ ಮತ್ತು ವಿದೇಶಿ ಭಯೋತ್ಪಾದಕರಿಗೆ ಸಹಾಯಕನಾಗಿ ಪ್ರಮುಖ ಪಾತ್ರ ವಹಿಸಿದ್ದಾನೆ. ಶೋಪಿಯಾನ್ ಜಿಲ್ಲೆಯ ಮತ್ತೊಬ್ಬ ಸಕ್ರಿಯ ಭಯೋತ್ಪಾದಕ ಅದ್ನಾನ್ ಸಫಿ ದಾರ್, 2024 ರಿಂದ ಎಲ್‌ಇಟಿ ಮತ್ತು ಟಿಆರ್‌ಎಫ್‌ಗಾಗಿ ಜಂಟಿಯಾಗಿ ಕೆಲಸ ಮಾಡುತ್ತಿದ್ದಾನೆ. ಪಾಕಿಸ್ತಾನಿ ನಿರ್ವಾಹಕರಿಂದ ಭಯೋತ್ಪಾದಕರಿಗೆ ಮಾಹಿತಿ ಪಡೆಯುವ ಮಾರ್ಗವಾಗಿ ಕಾರ್ಯನಿರ್ವಹಿಸುತ್ತಾನೆ.

ಇನ್ನು ಜುಬೈರ್ ಅಹ್ಮದ್ ವಾನಿ ಅಲಿಯಾಸ್ ಅಬು ಉಬೈದಾ ಅಲಿಯಾಸ್ ಉಸ್ಮಾನ್ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿದ್ದಾನೆ. ಈತನನ್ನು ಎ+ ಸಕ್ರಿಯ ಭಯೋತ್ಪಾದಕ ಎಂದು ವರ್ಗೀಕರಿಸಲಾಗಿದೆ. 2018 ರಿಂದ ಭದ್ರತಾ ಪಡೆಗಳ ಮೇಲಿನ ದಾಳಿಗಳಲ್ಲಿ ಹಲವು ಬಾರಿ ಭಾಗಿಯಾಗಿದ್ದಾನೆ.

ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಹರೂನ್ ರಶೀದ್ ಗನೈ ಅನಂತ್‌ನಾಗ್‌ನಲ್ಲಿ ಸಕ್ರಿಯಲಾಗಿದ್ದು, ಭದ್ರತಾಪಡೆಗಳು ಈತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ. ಈತ ಈ ಹಿಂದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಪ್ರಯಾಣಿಸಿದ್ದ, ಅಲ್ಲಿ 2018 ರಲ್ಲಿ ತರಬೇತಿ ಪಡೆದಿದ್ದು, ಇತ್ತೀಚೆಗೆ ದಕ್ಷಿಣ ಕಾಶ್ಮೀರಕ್ಕೆ ಮರಳಿದ್ದಾನೆಂದು ವರದಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಪ್ರಮುಖ ಭಯೋತ್ಪಾದಕ ಜುಬೈರ್ ಅಹ್ಮದ್ ಗನಿ ಎಲ್‌ಇಟಿ ಜೊತೆ ಸಂಬಂಧ ಹೊಂದಿದ್ದು, ಭದ್ರತಾ ಪಡೆಗಳ ಮೇಲಿನ ದಾಳಿಗಳು ಮತ್ತು ಕಾಶ್ಮೀರದಲ್ಲಿ ನಡೆದ ಇತರ ಹತ್ಯೆಗಳಲ್ಲಿ ನಿರಂತರವಾಗಿ ಭಾಗಿಯಾಗಿದ್ದಾನೆಂದು ವರದಿಗಳು ತಿಳಿಸಿವೆ.

ಪಟ್ಟಿಯಲ್ಲಿರುವ 14 ಮಂದಿ ಭಯೋತ್ಪಾದಕರು ದಕ್ಷಿಣ ಕಾಶ್ಮೀರದಾದ್ಯಂತ, ವಿಶೇಷವಾಗಿ ಅನಂತ್‌ನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದಾರೆಂದು ಹೇಳಲಾಗುತ್ತಿದ್ದು, ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಚುರುಕುಗಳಿಸಿದೆ.

ಅಧಿಕಾರಿಗಳು ಈ ಹಿಂದೆ ಈ ಪಾಕಿಸ್ತಾನಿ ಭಯೋತ್ಪಾದಕರಾದ ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಅವರ ಮೂರು ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಇವರ ಕುರಿತು ಮಾಹಿತಿ ನೀಡಿದವರಿಗೆ 20 ಲಕ್ಷ ರೂ.ಗಳ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com