
ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ದೆಹಲಿಯ ಕೃಷ್ಣಮೆನನ್ ಮಾರ್ಗದ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದ್ದಾರೆ.
ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಚಂದ್ರಚೂಡ್ ಅವರು 2024ರ ನವೆಂಬರ್ 8 ರಂದು ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು.
ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಬಂಗಲೆ ಸಂಖ್ಯೆ 5 ಹಾಲಿ ಮುಖ್ಯ ನ್ಯಾಯಮೂರ್ತಿ ಅವರಿಗೆ ಮೀಸಲಿಟ್ಟ ಬಂಗಲೆಯಾಗಿದ್ದು, ಚಂಡ್ರಚೂಡ್ ಅವರು ನಿವೃತ್ತಿ ಬಳಿಕವೂ ನಿಗದಿತ ಅವಧಿ ಮೀರಿ ಅಧಿಕೃತ ನಿವಾಸದಲ್ಲಿ ಇದ್ದದ್ದು ವಿವಾದಕ್ಕೆ ಕಾರಣವಾಗಿತ್ತು.
ಜುಲೈ 7 ರಂದು ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ್ದ ನ್ಯಾಯಮೂರ್ತಿ ಚಂದ್ರಚೂಡ್, ತಮ್ಮ ವಸ್ತುಗಳು ಪ್ಯಾಕ್ ಆಗಿವೆ ಮತ್ತು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಶೀಘ್ರದಲ್ಲೇ ಸರ್ಕಾರಿ ವಸತಿ ಸೌಕರ್ಯಕ್ಕೆ ತೆರಳುವುದಾಗಿ ತಿಳಿಸಿದ್ದರು.
ನ್ಯಾಯಮೂರ್ತಿ ಚಂದ್ರಚೂಡ್, ಅವರ ಪತ್ನಿ ಕಲ್ಪನಾ ಮತ್ತು ವಿಕಲಚೇತನರಾಗಿರುವ ಪುತ್ರಿಯರಾದ ಪ್ರಿಯಾಂಕಾ ಮತ್ತು ಮಾಹಿ ಅಧಿಕೃತ ಸಿಜೆಐ ನಿವಾಸದಲ್ಲಿ ವಾಸಿಸುತ್ತಿದ್ದರು.
'ನಾವು ವಾಸ್ತವವಾಗಿ ನಮ್ಮ ವಸ್ತುಗಳನ್ನು ಪ್ಯಾಕ್ ಮಾಡಿದ್ದೇವೆ. ಕೆಲವು ವಸ್ತುಗಳನ್ನು ಈಗಾಗಲೇ ಹೊಸ ಮನೆಗೆ ರವಾನಿಸಲಾಗಿದೆ ಮತ್ತು ಕೆಲವನ್ನು ಇಲ್ಲಿ ಸ್ಟೋರ್ ರೂಂನಲ್ಲಿ ಇರಿಸಲಾಗಿದೆ' ಎಂದು ಚಂದ್ರಚೂಡ್ ಅವರು ತಮ್ಮ ಅವಧಿ ಮೀರಿದ ವಾಸ್ತವ್ಯಕ್ಕೆ ಕಾರಣಗಳನ್ನು ವಿವರಿಸುತ್ತಾ ಹೇಳಿದ್ದರು.
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಅಧಿಕೃತ ಬಂಗಲೆಯನ್ನು ಇನ್ನೂ ತೆರವುಗೊಳಿಸಿಲ್ಲ. ಬಂಗಲೆ ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು.
ಮಾಜಿ ಸಿಜೆಐ ಈ ಬಗ್ಗೆ ವಿಷಾದ ವ್ಯಕ್ತಪಡಿಸಿ, ತಮ್ಮ ಹೆಣ್ಣುಮಕ್ಕಳ ವೈದ್ಯಕೀಯ ಸ್ಥಿತಿಯನ್ನು ಉಲ್ಲೇಖಿಸಿದ್ದರು. ಅವರಿಗೆ ವ್ಹೀಲ್‌ಚೇರ್ ಸ್ನೇಹಿ ಮನೆಯ ಅಗತ್ಯವಿದೆ ಮತ್ತು ಹೊಸ ಮನೆ ವಾಸಿಸಲು ಸಿದ್ಧವಾಗುವವರೆಗೆ ಕಾಯುತ್ತಿರುವುದಾಗಿ ಹೇಳಿದ್ದರು.
ಈ ಘಟನೆಗಳನ್ನು ಉಲ್ಲೇಖಿಸಿ, ಚಂದ್ರಚೂಡ್ ಅವರು ತಮ್ಮ ಉತ್ತರಾಧಿಕಾರಿ ಸಿಜೆಐ ಸಂಜೀವ್ ಖನ್ನಾ ಅವರೊಂದಿಗೆ ಮಾತನಾಡಿ, ಸಿಜೆಐ ಆಗುವ ಮೊದಲು ತಾವು ವಾಸಿಸುತ್ತಿದ್ದ 14, ತುಘಲಕ್ ರಸ್ತೆಯ ಬಂಗಲೆಗೆ ಹಿಂತಿರುಗುವುದಾಗಿ ಹೇಳಿದ್ದಾಗಿ ತಿಳಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ತಿದ್ದುಪಡಿ) ನಿಯಮಗಳು, 2022 ರ ನಿಯಮ 3 ಬಿ ಅಡಿಯಲ್ಲಿ, ಭಾರತದ ನಿವೃತ್ತ ಮುಖ್ಯ ನ್ಯಾಯಾಧೀಶರು ನಿವೃತ್ತಿಯ ನಂತರ ಗರಿಷ್ಠ ಆರು ತಿಂಗಳ ಅವಧಿಗೆ ಕೃಷ್ಣ ಮೆನನ್ ಮಾರ್ಗದಲ್ಲಿರುವ ಅಧಿಕೃತ ಬಂಗಲೆಯಲ್ಲಿ ಉಳಿದುಕೊಳ್ಳಬಹುದು.
Advertisement