
ಪಾಟ್ನಾ: ಸುಮಾರು ಮೂರು ತಿಂಗಳ ಹಿಂದೆ ಮೃತಪಟ್ಟಿರುವುದಾಗಿ ಘೋಷಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಜೀವಂತವಾಗಿ ಪತ್ತೆಯಾಗಿದ್ದಾರೆ, ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಬೂತ್ ಮಟ್ಟದ ಅಧಿಕಾರಿಗಳು (BLO's) ಮನೆ ಮನೆಗೆ ತೆರಳಿ ನಡೆಸಿದ ಅಭಿಯಾನದ ಫಲವಾಗಿ ಇದು ಬೆಳಕಿಗೆ ಬಂದಿದೆ.
ಕಳೆದ ತಿಂಗಳು ಮತದಾರರ ಪಟ್ಟಿ ಪರಿಶೀಲನೆಗಾಗಿ ಬಿಹಾರದ ಗ್ರಾಮೀಣ ಪಾಟ್ನಾದ ಧನರುವಾ ನಿವಾಸಿ ಶಿವರಂಜನ್ ಕುಮಾರ್ ಅವರ ಮನೆಗೆ ಬಿಎಲ್‌ಒ ಅಧಿಕಾರಿ ಭೇಟಿ ನೀಡಿದಾಗ ನಿಶಾ ಕುಮಾರಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಸರ್ಕಾರಿ ದಾಖಲೆಗಳಲ್ಲಿ ಈಗಾಗಲೇ ನಿಶಾ ಕುಮಾರಿ ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದರಿಂದ ಬಿಎಲ್‌ಒ ದಿಗ್ಭ್ರಮೆಗೊಂಡರು. ಮೇ 5 ರಂದು ರಾಜ್ಯ ಸರ್ಕಾರದಿಂದ ಮರಣ ಪ್ರಮಾಣಪತ್ರ ನೀಡಲಾಗಿತ್ತು.
ಮತದಾರರ ಪಟ್ಟಿಯನ್ನು ಅಧಿಕಾರಿ ಪರಿಶೀಲಿಸಿದಾಗ, ಕಂದಾಯ, ಭೂ ಸುಧಾರಣೆ ಮತ್ತು ನೋಂದಣಿ ಇಲಾಖೆಯು ಮರಣ ಪ್ರಮಾಣಪತ್ರವನ್ನು ನೀಡಿದೆ ಎಂದು ಗೊತ್ತಾಯಿತು. ನಿಶಾ ಅವರ ಮರಣ ಪ್ರಮಾಣಪತ್ರವನ್ನು ಮಾಹಿತಿ ಹಕ್ಕು ಕಾಯ್ದೆಯ ಕೌಂಟರ್ ಮೂಲಕ ಪಡೆಯಲಾಯಿತು. ಬಿಎಲ್‌ಒ ನಿಶಾ ಅವರ ವಿವರಗಳನ್ನು ಸಂಗ್ರಹಿಸಿ ಅವರಿಗೆ ಎಣಿಕೆ ಫಾರ್ಮ್ ನ್ನು ಅಧಿಕಾರಿ ನೀಡಿದರು.
ಆದರೆ ನಿಶಾ ಅವರ ಚಿಂತೆಗಳು ಅಲ್ಲಿಗೆ ಮುಗಿಯಲಿಲ್ಲ. ತಮ್ಮ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯ ಹೆಸರನ್ನು ಹುಡುಕುತ್ತಾ ಧನುರುವಾದಲ್ಲಿ ಆರ್‌ಟಿಐ ಮೂಲಕ ಅರ್ಜಿಯನ್ನು ಸಲ್ಲಿಸಿದರು. ಅದು ಅವರ ಪತಿ ಶಿವರಂಜನ್ ಎಂದು ತಿಳಿದು ಆಘಾತಕ್ಕೊಳಗಾದರು.
ನಂತರ ನಿಶಾ ಬಿಡಿಒ ಸೀಮಾ ಕುಮಾರಿ ಅವರಿಗೆ ದೂರು ನೀಡಿ, ಮರಣ ಪ್ರಮಾಣಪತ್ರವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಪಂಚಾಯತ್ ಕಾರ್ಯದರ್ಶಿ, ಮುಖಿಯಾ ಮತ್ತು ಅಂಗನವಾಡಿ ಸೇವಿಕಾ ವಿರುದ್ಧ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಬಿಡಿಒ ಹೇಳಿದರು.
ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಅಂಗನವಾಡಿ ಸೇವಿಕಾ ಸದಸ್ಯರು, ಸಂಬಂಧಪಟ್ಟ ಪಂಚಾಯತ್ ಕಾರ್ಯದರ್ಶಿ ಮತ್ತು ಮುಖಿಯಾ ಅವರು ಕಳುಹಿಸಿದ್ದಾರೆ. ಅವರ ಸಹಿ ಮತ್ತು ಅಧಿಕೃತ ಮುದ್ರೆ ಇಲ್ಲದೆ ಅರ್ಜಿಯನ್ನು ಸಲ್ಲಿಸಲು ಹೇಗೆ ಸಾಧ್ಯ ಎಂದು ಬ್ಲಾಕ್ ಕಚೇರಿಯಲ್ಲಿ ನಿಯೋಜಿಸಲಾದ ಸಿಬ್ಬಂದಿಯೊಬ್ಬರು ಕೇಳುತ್ತಾರೆ.
ಶಿವರಂಜನ್ ದಂಪತಿ ದೀರ್ಘಕಾಲದಿಂದ ಭಿನ್ನಾಭಿಪ್ರಾಯ ಹೊಂದಿದ್ದರು. ತಮ್ಮ ಮರಣದ ನಂತರ ಕುಟುಂಬ ಪಿಂಚಣಿಯ ಪ್ರಯೋಜನಗಳನ್ನು ಪತ್ನಿಗೆ ನೀಡಲು ಬಯಸದ ಕಾರಣ ತಮ್ಮ ಪತ್ನಿಯನ್ನು ಸತ್ತಿದ್ದಾರೆಂದು ಘೋಷಿಸಿದರು ಎಂದು ಕುಟುಂಬ ಮೂಲಗಳು ಹೇಳುತ್ತವೆ.
Advertisement