
ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದರ್ ಜೈನ್ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದ್ದು, ದೆಹಲಿ ಮಾಜಿ ಪಿಡಬ್ಲ್ಯೂಡಿ ಸಚಿವರು ಮತ್ತು ಇತರರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ವಿಶೇಷ ನ್ಯಾಯಾಲಯ ಸೋಮವಾರ ಅಂಗೀಕರಿಸಿದೆ.
2018ರಲ್ಲಿ ಇಲಾಖೆಗೆ ಸೃಜನಶೀಲ ತಂಡವನ್ನು ನೇಮಿಸಿಕೊಳ್ಳುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಜೈನ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಆದರೆ 'ತನಿಖೆಯಲ್ಲಿ ಯಾವುದೇ ಕ್ರಿಮಿನಲ್ ಚಟುವಟಿಕೆ ಅಥವಾ ಸರ್ಕಾರಕ್ಕೆ ನಷ್ಟವಾಗಿರುವುದು ಕಂಡುಬಂದಿಲ್ಲ' ಎಂದು ಸಿಬಿಐ ಕ್ಲೋಸರ್ ರಿಪೋರ್ಟ್ ಸಲ್ಲಿಸಿದೆ.
ತನಿಖಾ ಸಂಸ್ಥೆಯು ಇಷ್ಟು ದೀರ್ಘಾವಧಿಯವರೆಗೆ ಯಾವುದೇ ಅಪರಾಧ ಸಾಬೀತಾಗುವಂತಹ ಪುರಾವೆಗಳನ್ನು ಕಂಡುಕೊಂಡಿಲ್ಲ ಮತ್ತು ಮುಂದಿನ ಕ್ರಮಗಳು ಯಾವುದೇ ಉಪಯುಕ್ತ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ವಿಶೇಷ ನ್ಯಾಯಾಧೀಶ ಡಿಗ್ ವಿನಯ್ ಸಿಂಗ್ ಅವರು ಹೇಳಿದ್ದಾರೆ.
ಪಿಡಬ್ಲ್ಯೂಡಿ ಕೆಲಸಗಳಿಗಾಗಿ ಸೃಜನಶೀಲ ತಂಡ ನೇಮಿಸಿಕೊಳ್ಳಲು ಖಾಸಗಿ ಕಂಪನಿಗೆ ಟೆಂಡರ್ ನೀಡುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಉಲ್ಲೇಖದ ಮೇರೆಗೆ ಸಿಬಿಐ ಮೇ 28, 2018 ರಂದು ಪ್ರಕರಣ ದಾಖಲಿಸಿತ್ತು.
ಈಗ ನಾಲ್ಕು ವರ್ಷಗಳ ನಂತರ, ಸಿಬಿಐ ಈ ಪ್ರಕರಣದಲ್ಲಿ ಮುಕ್ತಾಯ ವರದಿಯನ್ನು ಸಲ್ಲಿಸಿದ್ದು, 'ಆರ್ಥಿಕ ಲಾಭ, ಪಿತೂರಿ ಅಥವಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ' ಎಂದು ಒತ್ತಿಹೇಳಿದೆ.
Advertisement