
ನವದೆಹಲಿ: ಕೃಷ್ಣಾ ನದಿಗೆ ನಿರ್ಮಿಸಿರುವ ಆಲಮಟ್ಟಿ ಅಣೆಕಟ್ಟು ಎತ್ತರವನ್ನು ಹೆಚ್ಚಿಸುವ ಕರ್ನಾಟಕದ ನಿರ್ಧಾರವನ್ನು ತಡೆಯಬೇಕು ಎಂದು ಕೋರಿ ಮಹಾರಾಷ್ಟ್ರ ಸರ್ಕಾರವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ನವದೆಹಲಿಯ ಜಲಶಕ್ತಿ ಸಚಿವಾಲಯದಲ್ಲಿ ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ನಿಯೋಗದೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಿದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ–ಪಾಟೀಲ್ ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಳವಾದರೆ ಹಿನ್ನೀರಿನಿಂದ ಸಾಂಗ್ಲಿ, ಸತಾರಾ, ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರವು ಅಣೆಕಟ್ಟಿನ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಏರಿಸಲು ಪ್ರಸ್ತಾಪಿಸಿದೆ. ಇದರಿಂದ ಕೃಷ್ಣಾ ಜಲಾನಯದ ಪ್ರದೇಶದಲ್ಲಿರುವ ಸಾಂಗ್ಲಿ, ಸತಾರಾ, ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಲಿದ್ದು, ಗಂಭೀರ ಪರಿಣಾಮ ಎದುರಾಗಲಿದೆ.
ಪರಿಸರ ಹಾಗೂ ಮನುಷ್ಯರ ಮೇಲಾಗುವ ಹಾನಿಯನ್ನು ಪರಿಗಣಿಸಿ, ನಮ್ಮ ರಾಜ್ಯವು ನಿರಂತರವಾಗಿ ಆಕ್ಷೇಪಣೆ ವ್ಯಕ್ತಪಡಿಸಿದೆ. ಇದಕ್ಕೆ ಸಂಬಂಧಿಸಿ, ಅಂಕಿಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಹೀಗಾಗಿ, ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ, ಅಣೆಕಟ್ಟೆ ಹೆಚ್ಚಳ ಪ್ರಸ್ತಾಪವನ್ನು ರದ್ದುಮಾಡಬೇಕು ಎಂದು ಒತ್ತಾಯಿಸಿದ್ದಾರೆ.
2019 ಮತ್ತು 2021 ರಲ್ಲಿ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಹಾಗೂ ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದಾಗಿ ತೀವ್ರ ಪ್ರವಾಹ ಸಂಭವಿಸಿದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದು ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವಿಖೆ-ಪಾಟೀಲ್ ಹೇಳಿದರು.
Advertisement