
ನವದೆಹಲಿ: ಆರೋಪಿ ದಾಖಲಿಸಿದ ಎಫ್‌ಐಆರ್‌ನಲ್ಲಿ ತಪ್ಪೊಪ್ಪಿಗೆ ಇದ್ದರೆ, ಅದನ್ನು ವಿಚಾರಣೆ ವೇಳೆ ಆರೋಪಿಯ ವಿರುದ್ಧದ ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂತಹ ಎಫ್‌ಐಆರ್‌ಗಳು ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 25 (ಪೊಲೀಸ್ ಅಧಿಕಾರಿಗೆ ತಪ್ಪೊಪ್ಪಿಗೆ) ಅಡಿಯಲ್ಲಿ ಬರಲಿದ್ದು ಅವುಗಳನ್ನು ದೃಢೀಕರಣದ ಉದ್ದೇಶಕ್ಕೂ ಬಳಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ತೀರ್ಪು ನೀಡಿತು.
ತನ್ನ ಮಾಲೀಕನ ಕೊಲೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ ನಾರಾಯಣ ಯಾದವ್ ಎಂಬುವವರಿಗೆ ಶಿಕ್ಷೆ ವಿಧಿಸಿತ್ತು. ಛತ್ತೀಸ್‌ಗಢ ಹೈಕೋರ್ಟ್ ಸೆಕ್ಷನ್ 304ರ ಅಡಿ ಕೊಲೆಗೆ ಸಮನಲ್ಲದ ನರಹತ್ಯೆ ಎಂದು ಪರಿಗಣಿಸಿ ಶಿಕ್ಷೆಯನ್ನು ಮಾರ್ಪಡಿಸಿತ್ತು. ಆದರೆ ಯಾದವ್ ಖುದ್ದು ಸಲ್ಲಿಸಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ತಪ್ಪಾಗಿ ಅವಲಂಬಿಸಿದೆ ಎಂದ ಸುಪ್ರೀಂ ಕೋರ್ಟ್, ಈ ದಾಖಲೆ ತಪ್ಪೊಪ್ಪಿಗೆಯ ಸ್ವರೂಪದ್ದಾಗಿದ್ದು ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ ಎಂದಿದೆ.
ಮೇಲ್ಮನವಿ ಸಲ್ಲಿಸಿದ ಎಫ್‌ಐಆರ್ ತಪ್ಪೊಪ್ಪಿಗೆಗೆ ಸಮನಾಗಿರುತ್ತದೆ. ಆರೋಪಿಯು ಪೊಲೀಸರ ಮುಂದೆ ನೀಡುವ ಯಾವುದೇ ತಪ್ಪೊಪ್ಪಿಗೆಯನ್ನು 1872ರ ಕಾಯಿದೆಯ ಸೆಕ್ಷನ್ 25ರ ಅಡಿಯಲ್ಲಿ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿನ ವೈದ್ಯಕೀಯ ಸಾಕ್ಷ್ಯಗಳನ್ನು ಯಾದವ್ ಅವರ ಎಫ್‌ಐಆರ್‌ನ ವಿಷಯಗಳೊಂದಿಗೆ ಹೋಲಿಸಿದ ಹೈಕೋರ್ಟ್ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.
ಅಲ್ಲದೆ ಹೈಕೋರ್ಟ್ ತಪ್ಪಾಗಿ ನಿಷೇಧಿತ ತಪ್ಪೊಪ್ಪಿಗೆಯ ಎಫ್‌ಐಆರ್ ಅನ್ನು ಅವಲಂಬಿಸಿದ್ದು ಆರೋಪಿಯನ್ನು ಅಪರಾಧದೊಂದಿಗೆ ನಂಟು ಕಲ್ಪಿಸಲು ಯಾವುದೇ ಕಾನೂನುಬದ್ಧ ಸ್ವೀಕಾರಾರ್ಹ ಪುರಾವೆಗಳು ಇಲ್ಲ ಎಂದ ನ್ಯಾಯಾಲಯ ಶಿಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿತು. ಪ್ರಕರಣದ ಒಟ್ಟಾರೆ ದೃಷ್ಟಿಕೋನದಲ್ಲಿ, ಛತ್ತೀಸ್‌ಗಢ ಹೈಕೋರ್ಟ್ ನೀಡಿದ ತೀರ್ಪು ಕಾನೂನಿನಲ್ಲಿ ಸಮರ್ಥನೀಯವಲ್ಲ ಎಂದ ಸುಪ್ರೀಂ ಕೋರ್ಟ್ ಎಲ್ಲಾ ಆರೋಪಗಳಿಂದ ಮೇಲ್ಮನವಿದಾರರನ್ನು ಮುಕ್ತಗೊಳಿಸಿತು. ತೀರ್ಪಿನ ಪ್ರತಿಗಳನ್ನು ಎಲ್ಲಾ ಹೈಕೋರ್ಟ್‌ಗಳಿಗೆ ವಿತರಿಸುವಂತೆ ನ್ಯಾಯಾಲಯದ ರಿಜಿಸ್ಟ್ರಿಗೆ ನಿರ್ದೇಶಿಸಿತು.
Advertisement