
ಪಾಲಕ್ಕಾಡ್: ಬೆಕ್ಕನ್ನು ಕೊಂದು ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಆರೋಪದ ಮೇಲೆ ಕೇರಳದ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಮೇರೆಗೆ ಚೆರ್ಪುಲಸ್ಸೆರಿ ಮೂಲದ 32 ವರ್ಷದ ಶಜೀರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ವಿಡಿಯೋದಲ್ಲಿ ಬೆಕ್ಕಿಗೆ ಆಹಾರ ನೀಡುವುದು, ಅದನ್ನು ಕೊಂದು ನಂತರ ಅದರ ದೇಹದ ಭಾಗಗಳನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಇತ್ತೀಚೆಗೆ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
'ಕೊಯಮತ್ತೂರಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವ ಶಂಕೆ ಇದೆ. ಸದ್ಯ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಇನ್ನೂ ಅವರನ್ನು ಅಧಿಕೃತವಾಗಿ ಬಂಧಿಸಿಲ್ಲ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎನ್‌ಎಸ್ ಸೆಕ್ಷನ್ 325 (ಯಾವುದೇ ಪ್ರಾಣಿಯನ್ನು ಕೊಲ್ಲುವುದು, ವಿಷಪೂರಿತಗೊಳಿಸುವುದು, ಅಂಗವಿಕಲಗೊಳಿಸುವುದು ಅಥವಾ ನಿಷ್ಪ್ರಯೋಜಕವಾಗಿಸುವ ಮೂಲಕ ದುಷ್ಕೃತ್ಯ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11 (1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement