
ನೋಯ್ಡಾ: ಡೇ ಕೇರ್‌ನಲ್ಲಿ 15 ತಿಂಗಳ ಮಗುವಿಗೆ ಕಚ್ಚಿ, ಹೊಡೆದು ನೆಲಕ್ಕೆ ಎಸೆದು ಕೆಲಸದಾಕೆ ವಿಕೃತಿ ಮೆರೆದಿರುವ ದಾರುಣ ಘಟನೆ ನೋಯ್ಡಾದಲ್ಲಿ ನಡೆದಿದೆ. ನೀವು ಉದ್ಯೋಗಸ್ಥರಾಗಿದ್ದರೆ ನಿಮ್ಮ ಮಕ್ಕಳನ್ನು ಡೇ ಕೇರ್‌ನಲ್ಲಿ ಬಿಡುತ್ತಿದ್ದರೆ, ನೀವು ಸುದ್ದಿಯನ್ನು ನೋಡಲೇಬೇಕು. ನೋಯ್ಡಾ ಸೆಕ್ಟರ್ -137ರ ಸೊಸೈಟಿಯಲ್ಲಿರುವ ಡೇ ಕೇರ್‌ನಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದ್ದು ಇದು ಎಲ್ಲರನ್ನೂ ಚಿಂತೆಗೀಡು ಮಾಡಿದೆ.
ಡೇ ಕೇರ್ ನಲ್ಲಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆಯ ದೃಶ್ಯ ಸೆರೆಯಾಗಿದ್ದು ಬೆಚ್ಚಿಬೀಳುವಂತೆ ಮಾಡಿದೆ. ಕೆಲಸದಾಕೆಯೊಬ್ಬಳು 15 ತಿಂಗಳ ಮುಗ್ಧ ಬಾಲಕಿಯ ಕಪಾಳಕ್ಕೆ ಹೊಡೆದಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೆ ಕಚ್ಚಿ, ಪ್ಲಾಸ್ಟಿಕ್ ಬೆಲ್ಟ್‌ನಿಂದ ಹೊಡೆದು ನೆಲಕ್ಕೆ ಎಸೆದಿದ್ದಾಳೆ. 2025ರ ಆಗಸ್ಟ್ 4ರಂದು ಘಟನೆ ನಡೆದಿದೆ. ಮಗುವನ್ನು ಡೇ ಕೇರ್ ನಿಂದ ಮನೆಗೆ ಕರೆದುಕೊಂಡು ಬಂದ ನಂತರ ಮಗು ನಿರಂತರವಾಗಿ ಅಳುತ್ತಿತ್ತು. ಬಟ್ಟೆ ಬದಲಾಯಿಸುವಾಗ ಬಾಲಕಿಯ ಎರಡೂ ತೊಡೆಗಳ ಮೇಲೆ ಕಚ್ಚಿರುವ ಗುರುತನ್ನು ತಾಯಿ ನೋಡಿದ್ದಾಳೆ. ಇವು ಹಲ್ಲುಗಳಿಂದ ಕಚ್ಚಿದ ಗುರುತುಗಳೆಂದು ವೈದ್ಯರು ಹೇಳಿದರು. ಅನುಮಾನದ ಮೇಲೆ, ಪೋಷಕರು ಡೇ ಕೇರ್‌ನ ಸಿಸಿಟಿವಿಯನ್ನು ನೋಡಿದಾಗ ಕೆಲಸದಾಕೆ ಬಾಲಕಿಯನ್ನು ಕ್ರೂರವಾಗಿ ಹೊಡೆದು ಎಸೆಯುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಪೋಷಕರು ಡೇ ಕೇರ್ ಮುಖ್ಯಸ್ಥರಿಗೆ ಮಾಹಿತಿ ನೀಡಿದಾಗ ಆರೋಪಿ ಕೆಲಸದಾಕೆ ವಿರುದ್ಧ ಕ್ರಮಕೈಗೊಳ್ಳುವ ಬದಲು ಡೇ ಕೇರ್ ಮುಖ್ಯಸ್ಥರು ಪೋಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸೆಕ್ಟರ್ -142 ಪೊಲೀಸ್ ಠಾಣೆ ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಪ್ರಕರಣ ಸಂಬಂಧ ಆರೋಪಿ ಕೆಲಸದಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.
Advertisement