
ನವದೆಹಲಿ: ರಾಹುಲ್ ಗಾಂಧಿ ಮಾಡಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿನ ಅಕ್ರಮಗಳ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಶಶಿ ತರೂರ್, ರಾಹುಲ್ ಗಾಂಧಿ ಎತ್ತಿರುವ ಕೆಲವು ಗಂಭೀರ ಪ್ರಶ್ನೆಗಳಿಗೆ ಚುನಾವಣಾ ಆಯೋಗವು ಗಂಭೀರವಾದ ಉತ್ತರಗಳನ್ನು ನೀಡಬೇಕು ಎಂದಿದ್ದಾರೆ.
ಬಿಹಾರಗಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ 'ಮತ ಕಳ್ಳತನ' ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ನಾಯಕರು ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
'ನನ್ನ ಮಟ್ಟಿಗೆ ಈ ವಿಷಯ ತುಂಬಾ ಸರಳವಾಗಿದೆ. ರಾಹುಲ್ ಗಾಂಧಿ ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ; ಅವುಗಳಿಗೆ ಗಂಭೀರ ಉತ್ತರಗಳು ಬೇಕಾಗಿವೆ. ಚುನಾವಣಾ ಆಯೋಗವು ರಾಷ್ಟ್ರದ ಬಗ್ಗೆ ಜವಾಬ್ದಾರಿಯನ್ನು ಹೊಂದಿದೆ. ಜೊತೆಗೆ ನಮ್ಮ ಚುನಾವಣೆಗಳ ಈ ಸಂಪೂರ್ಣ ವಿಶ್ವಾಸಾರ್ಹತೆಯ ಬಗ್ಗೆ ಸಾರ್ವಜನಿಕರ ಮನಸ್ಸಿನಲ್ಲಿ ಯಾವುದೇ ಸಂದೇಹಗಳು ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಕೂಡ ಹೊಂದಿದೆ' ಎಂದು ಹೇಳಿದ್ದಾರೆ.
ಚುನಾವಣೆಗಳು ಇಡೀ ದೇಶಕ್ಕೆ ಮುಖ್ಯ. ನಕಲಿ ಮತದಾನ, ಬಹು ವಿಳಾಸ ಅಥವಾ ನಕಲಿ ಮತಗಳಿವೆಯೇ ಎಂಬ ಅನುಮಾನಗಳಿಂದ ಅಪಾಯಕ್ಕೆ ಸಿಲುಕುವುದಕ್ಕಿಂತ ನಮ್ಮ ಪ್ರಜಾಪ್ರಭುತ್ವವು ತುಂಬಾ ಅಮೂಲ್ಯವಾಗಿದೆ. ಜನರ ಮನಸ್ಸಿನಲ್ಲಿ ಸಂದೇಹಗಳಿದ್ದರೆ, ಅವುಗಳನ್ನು ಪರಿಹರಿಸಬೇಕು. ಈ ಪ್ರಶ್ನೆಗಳಿಗೆ ಉತ್ತರಗಳು ಲಭ್ಯವಿರಬಹುದು. ಆದರೆ, ಆ ಉತ್ತರಗಳನ್ನು ವಿಶ್ವಾಸಾರ್ಹವಾಗಿ ಒದಗಿಸಬೇಕು. ಚುನಾವಣಾ ಆಯೋಗವು ಪ್ರಶ್ನೆಗಳನ್ನು ತೆಗೆದುಕೊಂಡು ಅವುಗಳನ್ನು ಪರಿಹರಿಸಬೇಕು ಎಂಬುದು ನನ್ನ ಏಕೈಕ ವಿನಂತಿ...' ಎಂದು ತಿಳಿಸಿದರು.
Advertisement