ರಾಹುಲ್ ನೇತೃತ್ವದಲ್ಲಿ INDIA ಬ್ಲಾಕ್ ಪ್ರತಿಭಟನಾ ರ‍್ಯಾಲಿ; ಬ್ಯಾರಿಕೇಡ್ ಹತ್ತಿ ಸಂಸದರ ಅಕ್ರೋಶ; ಚುನಾವಣಾ ಆಯೋಗ ಪ್ರಧಾನ ಕಚೇರಿ ಬಳಿ ಹೈಡ್ರಾಮಾ

ಲೋಕಸಭೆ ವಿರೋದ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಚುನಾವಣಾ ಆಯೋಗದ ಪ್ರಧಾನ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ಆರಂಭಿಸಿದ್ದರು.
Congress protest
ಕಾಂಗ್ರೆಸ್ ಪ್ರತಿಭಟನೆ
Updated on

ನವದೆಹಲಿ: ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಚುನಾವಣಾ ದುಷ್ಕೃತ್ಯಗಳನ್ನು ನಡೆಸುತ್ತಿದೆ ಎಂದು ಆರೋಪಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ಸೋಮವಾರ (ಆಗಸ್ಟ್ 11) ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದು, ಈ ವೇಳೆ ಚುನಾವಣಾ ಆಯೋಗದ ಪ್ರಧಾನ ಕಚೇರಿಯ ಬಳಿ ಭಾರೀ ಹೈಡ್ರಾಮಾ ನಡೆದಿದೆ.

ಲೋಕಸಭೆ ವಿರೋದ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಚುನಾವಣಾ ಆಯೋಗದ ಪ್ರಧಾನ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ಆರಂಭಿಸಿದ್ದರು.

ಆದರೆ, ಪ್ರತಿಭಟನೆಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪೊಲೀಸರು ರ‍್ಯಾಲಿಗೆ ತಡೆಯೊಡ್ಡಿದ್ದು, ಈವೇಳೆ ಕೆಲ ಸಂಸದರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬ್ಯಾರಿಕೇಡ್ ಹತ್ತುವ ಪ್ರಯತ್ನ ಮಾಡಿದ್ದಾರೆಂದು ತಿಳಿದುಬಂದಿದೆ.

ಪ್ರತಿಭಟನೆಗೆ ಅಧಿಕಾರಿಗಳು ಅನುಮತಿ ನೀಡದ ಹಿನ್ನೆಲೆಯಲ್ಲಿ ಸಂಸದರು ಹಾಗೂ ಕಾಂಗ್ರೆಸ್ ನಾಯಕರು ರಸ್ತೆಯಲ್ಲೇ ಕುಳಿತು ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರು ಮಾತನಾಡಿ, ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ 10 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಸಲಾಯಿತು; ಮತಗಳನ್ನು ಕದ್ದಿದ್ದಲ್ಲದೆ, ಬೂತ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕೆಲಸ ಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಆರ್‌ಜೆಡಿ ಸಂಸದ ಮನೋಜ್ ಝಾ ಅವರು ಮಾತನಾಡಿ, ಎಸ್‌ಐಆರ್ ಒಂದು ವಂಚನೆಯಾಗಿದ್ದು, ಸುಪ್ರೀಂಕೋರ್ಟ್ ಸೂಚನೆಯ ಹೊರತಾಗಿಯೂ ಚುನಾವಣಾ ಆಯೋಗವು ವರ್ಗೀಕೃತ ಡೇಟಾವನ್ನು ಒದಗಿಸುತ್ತಿಲ್ಲ. ಇದು ಮೊಂಡುತನವಲ್ಲದೆ ಬೇರನೂ ಅಲ್ಲ ಎಂದು ಹೇಳಿದ್ದಾರೆ.

Congress protest
ಇತರ ರಾಜ್ಯಗಳ ಮತ ವಂಚನೆ ಬಗ್ಗೆ ಮಾತಾಡುತ್ತಿಲ್ಲವೇಕೆ? ಗಾಂಧಿ ಕುಟುಂಬದ ಇತಿಹಾಸವೇ ಅಕ್ರಮ: ರಾಹುಲ್ ವಿರುದ್ಧ BJP ವಾಗ್ದಾಳಿ

ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರು ಮಾತನಾಡಿ, ರಾಹುಲ್ ಗಾಂಧಿ ಗಾಂಧೀಜಿಯವರ ಹಾದಿಯಲ್ಲಿ ಸಾಗುತ್ತಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ, ಆದರೆ ಚುನಾವಣಾ ಆಯೋಗ ಅದನ್ನು ಪರಿಗಣಿಸಲು ಸಿದ್ಧವಿಲ್ಲ. ಬದಲಿಗೆ ಅಫಿಡವಿಟ್ ಕೇಳುತ್ತಿದೆ. ಚುನಾವಣಾ ಆಯೋಗ ಯಾರ ಒತ್ತಡದಲ್ಲಿದೆ ಎಂದು ಎಲ್ಲರಿಗೂ ತಿಳಿದಿದೆ. ಇದೀಗ ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಮಾಡಿದ ದಂಡಿ ಮೆರವಣಿಗೆಯಂತೆ, ನಾವು ಪ್ರಜಾಪ್ರಭುತ್ವವನ್ನು ಉಳಿಸಲು ಮೆರವಣಿಗೆ ನಡೆಸುತ್ತಿದ್ದೇವೆಂದು ತಿಳಿಸಿದ್ದಾರೆ.

ಏತನ್ಮಧ್ಯೆ, ವಿರೋಧ ಪಕ್ಷದ ಸಂಸದರು ಪ್ರತಿಭಟನಾ ಮೆರವಣಿಗೆಗೆ ಯಾವುದೇ ಅನುಮತಿಯನ್ನು ಕೋರಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಪೊಲೀಸರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ಅವರು, ಪೊಲೀಸರು ಎಂದಿಗೂ ಅನುಮತಿ ನೀಡುವುದಿಲ್ಲ. ಸರ್ಕಾರದ ನಿರ್ದೇಶನದ ಮೇರೆಗೆ ಅವರು ರಾಜಕೀಯ ಭಾಷೆಯನ್ನು ಬಳಸುತ್ತಿದ್ದಾರೆ. ಇಡೀ ವಿರೋಧ ಪಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಮೆರವಣಿಗೆ ನಡೆಸಲಿದೆ. ಅವರು ನಮ್ಮನ್ನು ತಡೆಯಲು ಪ್ರಯತ್ನಿಸುತ್ತಾರೆ, ಆದರೆ ನಾವು ಚುನಾವಣಾ ಆಯೋಗದ ಕಚೇರಿಯನ್ನು ತಲುಪಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com