
ಚೆನ್ನೈ: ಖ್ಯಾತ ತಮಿಳು ಗೀತೆ ರಚನೆಕಾರ ಮತ್ತು ಕವಿ ವೈರಮುತ್ತು ಅವರು ಕಾರ್ಯಕ್ರಮವೊಂದರಲ್ಲಿ 'ರಾಮನ ಕುರಿತು ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದ್ದು, ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ. ಅವರ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
'ರಾಮಾಯಣ' ಮಹಾಕಾವ್ಯದ ತಮಿಳು ಕೃತಿ ರಚನೆಕಾರ ಕಂಬನ್ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೈರಮುತ್ತು, ಪತ್ನಿ ಸೀತಾದೇವಿಯಿಂದ ಬೇರ್ಪಟ್ಟ ನಂತರ ರಾಮನು ಸ್ಥಿಮಿತ ಕಳೆದುಕೊಂಡಿದ್ದರು ಎಂಬ ಹೇಳಿಕೆ ತೀವ್ರ ವಿವಾದ ಹುಟ್ಟುಹಾಕಿದೆ.
'ಸೀತಾಳಿಂದ ಬೇರ್ಪಟ್ಟ ನಂತರ ಸ್ಥಿಮಿತ ಕಳೆದುಕೊಂಡ ರಾಮನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದೇ ಗೊತ್ತಿರಲಿಲ್ಲ. ಇಂತಹ ಸ್ಥಿತಿಯಲ್ಲಿ ನಡೆಯುವ ಅಪರಾಧಗಳನ್ನು ಐಪಿಸಿ (ಭಾರತೀಯ ದಂಡ ಸಂಹಿತೆ) ಸೆಕ್ಷನ್ 84ರ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಕಂಬನ್‌ಗೆ ಕಾನೂನು ತಿಳಿದಿಲ್ಲದಿರಬಹುದು, ಆದರೆ ಅವರಿಗೆ ಸಮಾಜ ಮತ್ತು ಮಾನವನ ಮನಸ್ಸು ತಿಳಿದಿತ್ತು ಎಂದು ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹಾಗೂ ಮಾಜಿ ಕೇಂದ್ರ ಸಚಿವ ಎಸ್. ಜಗತ್ರಾಕ್ಷಗನ್ ಉಪಸ್ಥಿತರಿದ್ದ ಸಮಾರಂಭದಲ್ಲಿ ಹೇಳಿದರು.
ಅಲ್ಲದೇ "ರಾಮನನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಲಾಗಿದ್ದು, ಕ್ಷಮಿಸಲಾಗಿದೆ. ರಾಮನನ್ನು ಮಾನವನನ್ನಾಗಿ, ದೇವರಾಗಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಇಂತಹ ಹೇಳಿಕೆಗಳನ್ನು "ಸ್ವೀಕಾರಾರ್ಹವಲ್ಲ ಎಂದು
ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಹೇಳಿದ್ದಾರೆ. ವೈರಮುತ್ತು ಅವರ ಹೇಳಿಕೆಗಳನ್ನು ಸಿಎಂ ಒಪ್ಪಿಕೊಳ್ಳುತ್ತಾರೆಯೇ? ಎಂದು ಸ್ಟಾಲಿನ್ ಅವರನ್ನು ಕೇಳಿದ್ದಾರೆ. ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಅವರು ವೈರಮುತ್ತು ಅವರನ್ನು "ಮೂರ್ಖ" ಮತ್ತು "ಸ್ಥಿಮಿತ ಕಳೆದುಕೊಂಡ ವ್ಯಕ್ತಿ ಎಂದು ಕರೆದಿದ್ದಾರೆ.
ವೈರಮುತ್ತು"ಪುನರಾವರ್ತಿತ ಅಪರಾಧಿ" ಎಂದು ಬಿಜೆಪಿ ಕರೆದಿದೆ. ಈ ಹಿಂದೆ ಹಿಂದೂ ದೇವತೆಯಾದ ಆಂಡಾಳಾಮ್ಮನ ಬಗ್ಗೆ ಅವರು ನೀಡಿದ್ದ ಹೇಳಿಕೆ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿತ್ತು ಎಂದು ಟೀಕಾ ಪ್ರಹಾರ ನಡೆಸಿದೆ. ಆದರೆ ತಮ್ಮ ಮಾತುಗಳನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ವೈರಮುತ್ತು ಅವರ ನಿಕಟ ಮೂಲಗಳು ತಿಳಿಸಿವೆ.
ಇದು ಸಾಹಿತ್ಯದ ವ್ಯಾಖ್ಯಾನವೇ ಹೊರತು ಧಾರ್ಮಿಕ ಭಾಷಣವಾಗಲಿ, ರಾಜಕೀಯ ಭಾಷಣವಾಗಲಿ ಅಲ್ಲ, ವೈರಮುತ್ತು ವಿರೋಧಿಗಳು ಹೇಳಿಕೆ ತಿರುಚಿ ಬೊಬ್ಬೆ ಹೊಡೆಯುತ್ತಿದ್ದಾರೆ. ಕಂಬನ್‌ನ ಕಾವ್ಯ ಪ್ರತಿಭೆಯನ್ನು ಎತ್ತಿ ಹಿಡಿಯಲು ಹಾಗೂ ರಾಮನನ್ನು ಮಾನವೀಯಗೊಳಿಸಲು ಈ ಮಾತುಗಳನ್ನು ಹೇಳಿದ್ದಾರೆಯೇ ಹೊರತು ಧಾರ್ಮಿಕ ನಂಬಿಕೆಗಳಿಗೆ ಅವಮಾನ ಮಾಡಿಲ್ಲ ಎಂದು ಅವು ಹೇಳಿವೆ.
Advertisement