
ಚಂಡೀಗಢ: ಸ್ವಾತಂತ್ರ್ಯ ದಿನಾಚರಣೆ ಇನ್ನು ಎರಡು ದಿನ ಬಾಕಿಯಿರುವಂತೆಯೇ ಪಾಕಿಸ್ತಾನದ ಐಎಸ್ ಐ ಬೆಂಬಲಿತ ಅಂತಾರಾಷ್ಟ್ರೀಯ ಉಗ್ರರ ಜಾಲವೊಂದನ್ನು ಪಂಜಾಬ್ ಪೊಲೀಸರು ಪತ್ತೆ ಹಚ್ಚಿದ್ದು, ರಾಜಸ್ಥಾನದಿಂದ ಐವರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಓರ್ವನನ್ನು ಕರೆದೊಯ್ಯುವಾಗ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಉಗ್ರರು ಇತ್ತೀಚೆಗೆ ಎಸ್‌ಬಿಎಸ್ ನಗರದಲ್ಲಿನ ಮದ್ಯದಂಗಡಿ ಮೇಲೆ ದಾಳಿ ಮಾಡಲು ಯೋಜಿಸಿತ್ತು. ಅಲ್ಲದೇ ಸ್ವಾತಂತ್ರ್ಯ ದಿನದಂದು ದಾಳಿ ನಡೆಸಲು ಸಂಚು ರೂಪಿಸಿತ್ತು ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಹೇಳಿದ್ದಾರೆ.
ಬಂಧಿತ ಉಗ್ರರಿಂದ ಒಂದು ಹ್ಯಾಂಡ್ ಗ್ರೇನೆಡ್, ಎರಡು ಕ್ಯಾಟ್ರಿಡ್ಜ್ ಗಳೊಂದಿಗೆ ಒಂದು 30 Bore ಪಿಸ್ತೂಲ್, ಎರಡು ಸೆಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನದ ಜೈಪುರ ಮತ್ತು ಟೊಂಕ್ ಜಿಲ್ಲೆಗಳಿಂದ ಐವರನ್ನು ಬಂಧಿಸಲಾಗಿದ್ದು,ಸಂಭಾವ್ಯ ದಾಳಿಯನ್ನು ತಪ್ಪಿಸಲಾಗಿದೆ ಎಂದು ಯಾದವ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆರೋಪಿಗಳು ವಿದೇಶಿ ಮೂಲದ ಜೀಶನ್ ಅಖ್ತರ್ ಮತ್ತು ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ ಮಾಸ್ಟರ್ ಮೈಂಡ್ ಮನ್ನು ಅಗ್ವಾನ್ ಅವರಿಂದ ನೇರ ನಿರ್ದೇಶನ ಪಡೆಯುತ್ತಿದ್ದರು ಎಂದು ಅವರು ಹೇಳಿದ್ದಾರೆ.
Advertisement