
ಪಾಟ್ನಾ: ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತಗಳನ್ನು ಕದಿಯಲು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ‘ಒಪ್ಪಂದ’ಮಾಡಿಕೊಂಡಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬುಧವಾರ ಆರೋಪಿಸಿದ್ದಾರೆ.
ಬಿಜೆಪಿ ನಾಯಕರು ಎರಡೆರಡು ಮತದಾರರ ಚೀಟಿ ಪಡೆಯಲು ಚುನಾವಣಾ ಆಯೋಗ ನೆರವಾಗುತ್ತಿದೆ ಎಂದು ಅವರು ಆಪಾದಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಮತಗಳ್ಳತನಕ್ಕೆ ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಕೈಜೋಡಿಸುತ್ತಿರುವುದು ಸತ್ಯ. ವಿಶೇಷ ತೀವ್ರ ಪರಿಷ್ಕರಣೆಯ (SIR) ಆರಂಭಿಕ ಕಸರತ್ತಿನ ಬಳಿಕ ಚುನಾವಣಾ ಆಯೋಗ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯನ್ನು 'ಮತಗಳ ಡಕಾಯಿತಿ' ಎಂದು ಕರೆಯಬೇಕು ಎಂದರು.
ರಾಜ್ಯ ಬಿಜೆಪಿ ಮುಖಂಡರು ಎರಡೆರಡು ಮತದಾರರ ಚೀಟಿ ಹೊಂದಲು ಚುನಾವಣಾ ಆಯೋಗ ನೆರವಾಗುತ್ತಿದೆ ಎಂದು ಆರೋಪಿಸಿದರು.
ಕರಡು ಮತದಾರರ ಪಟ್ಟಿಯ ಪ್ರಕಾರ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಯಾಗಿರುವ ಮುಜಾಫರ್‌ಪುರ ಮೇಯರ್ ನಿರ್ಮಲಾ ದೇವಿ ಅವರು ವಿಧಾನಸಭಾ ಕ್ಷೇತ್ರವೊಂದರ ಎರಡು ಬೇರೆ ಬೇರೆ ಬೂತ್‌ಗಳಲ್ಲಿ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ.
ಅಚ್ಚರಿಯ ವಿಷಯವೇನೆಂದರೆ ಅವರ ಕುಟುಂಬದ ಸದಸ್ಯರು ಕೂಡಾ ಇದೇ ವಿಧಾನಸಭಾ ಕ್ಷೇತ್ರದ ಎರಡು ಬೇರೆ ಬೇರೆ ಬೂತ್ ಗಳಲ್ಲಿ ಎರಡೆರಡು ವೋಟರ್ ಐಡಿ ಹೊಂದಿದ್ದಾರೆ ಎಂದು ತೇಜಸ್ವಿ ಯಾದವ್ ಹೇಳಿದರು. ಇಂತಹ ಅಕ್ರಮ ಹೇಗೆ ನಡೆಯಿತು? ಇದಕ್ಕೆ ಯಾರು ಹೊಣೆಗಾರರಾಗಬೇಕು ಎಂದು ಅವರು ಪ್ರಶ್ನಿಸಿದರು.
Advertisement