
ನವದೆಹಲಿ: ಈ ಬಾರಿ ದೀಪಾವಳಇ ಹಬ್ಬಕ್ಕೆ ಭರ್ಜರಿ ಉಡುಗೊರೆಯೊಂದನ್ನು ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಘೋಷಣೆ ಮಾಡಿದ್ದಾರೆ.
ಈ ಬಾರಿ ಡಬಲ್ ದೀಪಾವಳಿ ಎಂದಿರುವ ಮೋದಿ ಮೋದಿಯವರು, ಜಿಎಸ್‌ಟಿಯಲ್ಲಿ ಮಹತ್ವದ ಸುಧಾರಣೆ ತಂದು ತೆರಿಗೆ ಹೊರೆ ಕಡಿಮೆ ಮಾಡಲಾಗುವುದು ಎಂದು ಹೇಳಿದ್ದಾರೆ.
79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನವದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ, ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿಯವರು, ಕಳೆದ 8 ವರ್ಷಗಳಲ್ಲಿ, ನಾವು ಜಿಎಸ್‌ಟಿಯಲ್ಲಿ ಪ್ರಮುಖ ಸುಧಾರಣೆಯನ್ನು ಕೈಗೊಂಡಿದ್ದೇವೆ. ಮುಂದುವರೆದು ಮತ್ತಷ್ಟು ಜಿಎಸ್‌ಟಿ ಸುಧಾರಣೆಗಳನ್ನು ತರುತ್ತಿದ್ದೇವೆ. ಇದು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.
ತೆರಿಗೆ ಸ್ಲ್ಯಾಬ್‌ಗಳನ್ನು ತರ್ಕಬದ್ಧಗೊಳಿಸುವುದು, ಅಗತ್ಯ ಮತ್ತು ದಿನನಿತ್ಯದ ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವುದರ ಮೇಲೆ ಗಮನ ನೀಡಲಾಗುತ್ತಿದೆ. ಈ ಬಗ್ಗೆ ರಾಜ್ಯಗಳೊಂದಿಗೆ ಮಾತನಾಡಿದ್ದೇವೆ ನಮ್ಮ ಕೈಗಾರಿಕೆಗಳು ದೊಡ್ಡ ಲಾಭವನ್ನು ಪಡೆಯುತ್ತವೆ. ದೈನಂದಿನ ವಸ್ತುಗಳು ಅಗ್ಗವಾಗುತ್ತವೆ. ಇದು ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ. ಈ ಮೂಲಕ ಸಾಮಾನ್ಯ ಜನರಿಗೆ ಜೀವನವನ್ನು ಸುಲಭಗೊಳಿಸುವ ಮತ್ತು ನಮ್ಮ ಆರ್ಥಿಕತೆಯನ್ನು ಬಲಪಡಿಸುವುಕ್ಕೆ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಜೊತೆಗೆ ಪ್ರಧಾನಿ ಮೋದಿಯವರು ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆಯನ್ನೂ ಘೋಷಿಸಿದರು. ಈ ಯೋಜನೆಯಡಿಯಲ್ಲಿ, ಖಾಸಗಿ ವಲಯದಲ್ಲಿ ಮೊದಲ ಉದ್ಯೋಗ ಪಡೆಯುವವರಿಗೆ ಸರ್ಕಾರದಿಂದ 15,000 ರೂ. ಸಿಗಲಿದೆ.
ಜಿಎಸ್‌ಟಿ ಮಂಡಳಿಯ ಮುಂದಿನ ಸಭೆಯು ಸೆಪ್ಟೆಂಬರ್ 9ರಂದು ನಡೆಯಲಿದೆ. ಪ್ರಸ್ತುತ, ನಮ್ಮ ದೇಶದಲ್ಲಿ ಶೇ.0.5, ಶೇ.12, ಶೇ.18 ಮತ್ತು ಶೇ.28 ಜಿಎಸ್‌ಟಿ ಸ್ಲ್ಯಾಬ್‌ಗಳಿವೆ. ದೇಶದ ಜನರ ಖರೀದಿ ಶಕ್ತಿಯನ್ನು ಹೆಚ್ಚಿಸುವ ಗುರಿಯೊಂದಿಗೆ, ಕೇಂದ್ರ ಸರ್ಕಾರವು ವಿವಿಧ ವರ್ಗಗಳ ಸರಕುಗಳು, ಉತ್ಪನ್ನಗಳು ಮತ್ತು ಸೇವೆಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವತ್ತ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.
Advertisement