
ನಾಗ್ಪುರ: ಮತಕಳ್ಳತನ ಆರೋಪದ ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳ ಹೋರಾಟ ಮುಂದುವರೆದಿರುವಂತೆಯೇ ಇದಕ್ಕೆ ತಿರುಗೇಟು ನೀಡಿರುವ ಮಾಜಿ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಮ್ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.
ನಾಗ್ಪುರದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಮಾಜಿ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಮ್, 'ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿರುವವರೆಗೆ, ಸಾಂವಿಧಾನಿಕ ಸಂಸ್ಥೆಗಳು, ಸುಪ್ರೀಂ ಕೋರ್ಟ್ ಮತ್ತು ಸಂಸತ್ತನ್ನು ಅವರು ಗೌರವಿಸುವುದು ತುಂಬಾ ಕಷ್ಟ... ಒಂದು ಪಿತೂರಿಯ ಭಾಗವಾಗಿ, ರಾಹುಲ್ ಗಾಂಧಿ ದೇಶವನ್ನು ದೂಷಿಸಲು ಬಯಸುತ್ತಾರೆ ಎಂದು ಹೇಳಿದ್ದಾರೆ.
ಅಂತೆಯೇ ಹೊಸ ಸಂಸತ್ತು ನಿರ್ಮಾಣವಾದಾಗ, ರಾಹುಲ್ ಗಾಂಧಿ ಪ್ರತಿಭಟಿಸಿದರು; ರಾಮ ಮಂದಿರದ ಪವಿತ್ರೀಕರಣ ಸಮಾರಂಭದ ಆಹ್ವಾನವನ್ನೂ ನಿರಾಕರಿಸಿದರು... ಅವರು ಭಾರತದ ಸುಪ್ರೀಂ ಕೋರ್ಟ್‌ನತ್ತ ಬೆರಳು ತೋರಿಸುತ್ತಾರೆ. ಅವರು ಭಾರತದ ಸಂಸತ್ತನ್ನು ಗೌರವಿಸುವುದಿಲ್ಲ... ಈಗ ಅವರು ಚುನಾವಣಾ ಆಯೋಗವನ್ನು ಕಳ್ಳ ಎಂದು ಕರೆಯುತ್ತಿದ್ದಾರೆ.. ಎಂದು ಕಿಡಿಕಾರಿದರು.
ಮಹಾಭಿಯೋಗ ಗೊತ್ತುವಳಿಗೂ ಮುನ್ನ ರಾಜಿನಾಮೆ ನೀಡಿ
ಇದೇ ವೇಳೆ ಚುನಾವಣಾ ಆಯೋಗದ ಗೌರವಕ್ಕೆ ಚ್ಯುತಿ ತರುವ ರೀತಿಯಲ್ಲಿ ರಾಹುಲ್ ಗಾಂಧಿ ಆರೋಪಿಸುತ್ತಿದ್ದು, ರಾಹುಲ್ ಗಾಂಧಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ಗೊತ್ತುವಳಿ ತರುವ ಮೊದಲು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು... ಎಲ್ಲಾ ವಿರೋಧ ಪಕ್ಷದ ನಾಯಕರು ಸಹ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು..." ಎಂದು ಆಗ್ರಹಿಸಿದರು.
Advertisement