
ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಕೇಂದ್ರ ಚುನಾವಣಾ ಆಯೋಗ 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದು, ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಹೌದು.. ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ಆರಂಭಿಸಿದ್ದಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಬಿಹಾರ ಮತದಾರರ ಪಟ್ಟಿಯಿಂದ ಅಳಿಸಿಹಾಕಲಾದ 65 ಲಕ್ಷ ಜನರ ಹೆಸರುಗಳನ್ನು ಬಹಿರಂಗಪಡಿಸಿದೆ.
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 65 ಲಕ್ಷ ಜನರ ಹೆಸರುಗಳನ್ನು ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 19 ರೊಳಗೆ ಅಳಿಸಲಾದ ಹೆಸರುಗಳ ವಿವರಗಳನ್ನು ಸಾರ್ವಜನಿಕಗೊಳಿಸಬೇಕು ಮತ್ತು ಆಗಸ್ಟ್ 22 ರೊಳಗೆ ಅನುಸರಣಾ ವರದಿಯನ್ನು ಸಲ್ಲಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ.
ಚುನಾವಣಾ ಆಯೋಗವು ಮತಗಟ್ಟೆಗಳಾದ್ಯಂತ 'ASD' (ಗೈರುಹಾಜರಿ, ಸ್ಥಳಾಂತರಗೊಂಡ ಮತ್ತು ಸತ್ತ) ಮತದಾರರ ಹೆಸರುಗಳನ್ನು ಪ್ರಕಟಿಸುತ್ತಿದೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆನ್‌ಲೈನ್‌ನಲ್ಲಿ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿ ಹೇಳಿದರು.
ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (CEO) ಪ್ರಕಾರ, ರೋಹ್ತಾಸ್, ಬೇಗುಸರಾಯ್, ಅರ್ವಾಲ್ ಮತ್ತು ಇತರ ಸ್ಥಳಗಳ ಮತಗಟ್ಟೆಗಳಲ್ಲಿ ASD ಪಟ್ಟಿಗಳನ್ನು ಪ್ರದರ್ಶಿಸಲಾಗಿದೆ.
Advertisement