
ಪಾಟ್ನಾ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ(SIR) ಮೊದಲ ಹಂತದ ಸಮಯದಲ್ಲಿ ಕೈಬಿಟ್ಟ 65 ಲಕ್ಷಕ್ಕೂ ಹೆಚ್ಚು ಮತದಾರರ ವಿವರಗಳನ್ನು ಸೋಮವಾರ ಪ್ರಕಟಿಸಿದ್ದ ಚುನಾವಣಾ ಆಯೋಗ, ನೊಂದ ಮತದಾರರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಅರ್ಜಿ ಸಲ್ಲಿಸುವಂತೆ ಮಂಗಳವಾರ ಕೇಳಿಕೊಂಡಿದೆ.
ಬಿಹಾರ ಮುಖ್ಯ ಚುನಾವಣಾ ಅಧಿಕಾರಿ(CEO) ವಿನೋದ್ ಸಿಂಗ್ ಗುಂಜಿಯಾಲ್ ಅವರು ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಆಧಾರ್‌ನೊಂದಿಗೆ ಅರ್ಜಿ ಸಲ್ಲಿಸುವಂತೆ ಮತದಾರರಿಗೆ ಸೂಚಿಸಿದ್ದಾರೆ.
ಆಗಸ್ಟ್ 1 ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಲು ಆಧಾರ್ ಕಾರ್ಡ್ ಪುರಾವೆಯಾಗಿ ಸ್ವೀಕರಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
“ಕರಡು ಪಟ್ಟಿಯಲ್ಲಿ ಸೇರಿಸದ ಎಲ್ಲಾ ಮತದಾರರು ತಮ್ಮ EPIC ಸಂಖ್ಯೆಯ ಮೂಲಕ ಈ ಪಟ್ಟಿಯಲ್ಲಿ ತಮ್ಮ ನೋಂದಣಿ ಬಗ್ಗೆ ಮಾಹಿತಿಯನ್ನು ಕಾರಣದೊಂದಿಗೆ ಪಡೆಯಬಹುದು. 01.08.2025 ರಂದು ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಸೇರಿಸದ ಅಂತಹ ಮತದಾರರಿಗೆ ಸಂಬಂಧಿಸಿದ ಪಟ್ಟಿಯನ್ನು ಎಲ್ಲಾ ಬ್ಲಾಕ್ ಕಚೇರಿಗಳು, ಪಂಚಾಯತ್ ಕಚೇರಿ, ಪುರಸಭೆ ಕಚೇರಿ ಮತ್ತು ಮತದಾನ ಕೇಂದ್ರಗಳಲ್ಲಿ ಪ್ರದರ್ಶಿಸಲಾಗಿದೆ. ಪಟ್ಟಿಯಿಂದ ಕೈಬಿಟ್ಟ ಮತದಾರರು ತಮ್ಮ ಆಧಾರ್ ಕಾರ್ಡ್‌ನ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು” ಎಂದು ಬಿಹಾರ ಸಿಇಒ ಹೇಳಿದ್ದಾರೆ.
SIRನ ಮೊದಲ ಹಂತದಲ್ಲಿ ಕೈಬಿಡಲಾದ ಹೆಸರುಗಳ ವಿವರಗಳನ್ನು ರಾಜ್ಯಾದ್ಯಂತ ಬ್ಲಾಕ್‌ಗಳು, ಪಂಚಾಯತ್‌ಗಳು, ಪುರಸಭೆ ಕಚೇರಿಗಳು ಮತ್ತು ಮತಗಟ್ಟೆಗಳ ಕಚೇರಿಗಳಲ್ಲಿ ಪ್ರದರ್ಶಿಸಲಾಗಿದೆ ಎಂದು ಸಿಇಒ ಹೇಳಿದ್ದಾರೆ.
ನೊಂದ ಮತದಾರರು ಆಯಾ ಕಚೇರಿಗಳಿಗೆ ಭೇಟಿ ನೀಡಿ, ನಮೂನೆಗಳನ್ನು ಪಡೆದು, ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು ವಿವರವಾದ ಮಾಹಿತಿಯನ್ನು ಭರ್ತಿ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
Advertisement