
ಸತಾರಾ: ಕುಡಿದು ಚಾಲನೆ ಮಾಡುತ್ತಿದ್ದ ಆಟೋ ಚಾಲಕನೋರ್ವ ಮಹಿಳಾ ಪೊಲೀಸ್ ಪೇದೆಯನ್ನೇ ಆಟೋದಲ್ಲಿ ಎಳೆದೊಯ್ದ ಭೀಕರ ವಿಡಿಯೋ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ಸತಾರಾ ನಗರದ ಕ್ರಾಸಿಂಗ್‌ನಲ್ಲಿ ಕಂಠಪೂರ್ತಿ ಮದ್ಯಪಾನ ಮಾಡಿ ಆಟೋ ಚಲಾಯಿಸುತ್ತಿದ್ದ ಚಾಲಕ ಪರಿಶೀಲನೆಗಾಗಿ ವಾಹನ ನಿಲ್ಲಿಸಿದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಎಳೆದೊಯ್ದಿದ್ದಾನೆ. ಪಾನಮತ್ತ ಚಾಲಕನ ಕೃತ್ಯದಿಂದಾಗಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿ ಭಾಗ್ಯಶ್ರೀ ಜಾಧವ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲಗಳ ಪ್ರಕಾರಸತಾರಾ ನಗರದ ಕ್ರಾಸಿಂಗ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಮಹಿಳಾ ಭಾಗ್ಯಶ್ರೀ ಜಾಧವ್ ಅವರು ಆಟೋವನ್ನು ತಪಾಸಣೆಗಾಗಿ ನಿಲ್ಲಿಸುವಂತೆ ಕೇಳಿದಾಗ ಆಟೋ ಚಾಲಕ ಆಟೋ ನಿಲ್ಲಿಸಲು ನಿರಾಕರಿಸಿದ.
ನೋಡ ನೋಡುತ್ತಲೇ ಆಟೋ ನಿಲ್ಲಿಸಲು ಬಂದ ಮಹಿಳಾ ಪೊಲೀಸ್ ಅಧಿಕಾರಿ ಮೇಲೆಯೇ ಆಟೋ ನುಗ್ಗಿಸಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ಭಾಗ್ಯಶ್ರೀ ಜಾದವ್ ಆಟೋವನ್ನು ಹಿಡಿದುಕೊಂಡಿದ್ದು, ಸುಮಾರು 100 ಮೀಟರ್ ಗೂ ಅಧಿಕ ದೂರ ಆಕೆಯನ್ನು ಎಳೆದೊಯ್ದಿದ್ದಾನೆ.
ಈ ವೇಳೆ ದಾರಿಹೋಕರು ಇದನ್ನು ಕಂಡು ಒಗ್ಗೂಡಿ ಆಟೋವನ್ನು ಹಿಡಿದು ಮಹಿಳಾ ಪೊಲೀಸ್ ಅಧಿಕಾರಿಯನ್ನು ರಕ್ಷಿಸಿದ್ದಾರೆ. ಸ್ಥಳೀಯರು ಚಾಲಕ ಕಾಳೆಯನ್ನು ಥಳಿಸಿ ಪೊಲೀಸರನ್ನು ರಕ್ಷಿಸಿದರು. ನಂತರ ಚಾಲಕನನ್ನು ಪೊಲೀಸರು ಬಂಧಿಸಿದರು.
ಘಟನೆಯಲ್ಲಿ ಪೊಲೀಸ್ ಅಧಿಕಾರಿ ಜಾಧವ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವಿಷ್ಟೂ ಘಟನೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಸಿಕ್ಕಿಬೀಳುವ ಭಯ, ತಪ್ಪಿಸಿಕೊಳ್ಳಲು ಹೋಗಿ ಎಡವಟ್ಟು!
ಪಾನಮತ್ತ ಆಟೋಚಾಲಕನನ್ನು ದೇವರಾಜ್ ಕಾಳೆ ಎಂದು ಗುರುತಿಸಲಾಗಿದ್ದು ಪೊಲೀಸ್ ತಪಾಸಣೆ ವೇಳೆ ತಾನು ಪಾನಮತ್ತನಾಗಿರುವುದು ತಿಳಿಯುತ್ತದೆ ಎಂಬ ಭೀತಿಯಿಂದ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಗಿ ಹೇಳಿಕೆ ನೀಡಿದ್ದಾನೆ.
Advertisement