
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ ನಗರದ ಖೋಖ್ರಾದ ಸೆವೆಂತ್ ಡೇ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬ ಅದೇ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯನ್ನು ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ.
ಶಾಲೆ ಬಿಟ್ಟ ನಂತರ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತೀಕ್ಷ್ಣವಾದ ಪ್ರಯೋಗಾಲಯದ ಉಪಕರಣವನ್ನು ಹೊಂದಿದ್ದ ಆರೋಪಿ 8ನೇ ತರಗತಿ ವಿದ್ಯಾರ್ಥಿ, ಶಾಲೆಯಿಂದ ಸ್ವಲ್ಪ ದೂರದಲ್ಲಿ ಮನಿಯಾಶಾ ಸೊಸೈಟಿಯ ಗೇಟ್ ಬಳಿ 10ನೇ ತರಗತಿ ವಿದ್ಯಾರ್ಥಿ ಹೊಟ್ಟೆಗೆ ಇರಿದಿದ್ದಾನೆ.
ಘೋಡಾಸರ್ ನಿವಾಸಿಯಾದ ಮೃತ ಬಾಲಕ, ಕುಸಿದು ಬೀಳುವ ಮೊದಲು ಕಾಂಪೌಂಡ್‌ನ ಹಿಂಭಾಗಕ್ಕೆ ಓಡಿಹೋಗಿದ್ದು, ಆತನನ್ನು ಸಹ ವಿದ್ಯಾರ್ಥಿಗಳು ಸರ್ದಾರ್ ಪಟೇಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೂಲಗಳು ಒಂದು ಆತಂಕಕಾರಿ ಹಿನ್ನೆಲೆಯನ್ನು ಬಹಿರಂಗಪಡಿಸಿದ್ದು, ದಾಳಿಗೆ ಒಂದು ವಾರ ಮೊದಲು, ಹಲ್ಲೆಕೋರನು ಮೃತ ಬಾಲಕನ ಸೋದರಸಂಬಂಧಿ, ಅದೇ ಶಾಲೆಯ ವಿದ್ಯಾರ್ಥಿ ಜತೆ ಮೆಟ್ಟಿಲುಗಳ ಮೇಲೆ ಜಗಳವಾಡಿದ್ದನು. ಈ ಕೊಲೆಯು ಐದರಿಂದ ಏಳು ಇತರ ವಿದ್ಯಾರ್ಥಿಗಳ ಮುಂದೆ ಅತ್ಯಂತ ನಿಖರವಾಗಿ ನಡೆಸಲಾದ ಸೇಡಿನ ಪೂರ್ವಯೋಜಿತ ಕೃತ್ಯವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಮೃತ ಬಾಲಕನ ಕುಟುಂಬ, ಸುದ್ದಿ ತಿಳಿಯುತ್ತಿದ್ದಂತೆ ಶಾಲಾ ಆವರಣಕ್ಕೆ ನುಗ್ಗಿ, ಪಿಠೋಪಕರಣಗಳನ್ನು ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದರು ಮತ್ತು ಶಾಲಾ ಸಿಬ್ಬಂದಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Advertisement