
ನವದೆಹಲಿ: ಅಮೆರಿಕವನ್ನು Bully (ದಬ್ಬಾಳಿಕೆ ಮಾಡುವವ) ಎಂದು ಕರೆದಿರುವ ಭಾರತದ ಚೀನಾ ರಾಯಭಾರಿ ಕ್ಸು ಫೀಹಾಂಗ್, ಮುಕ್ತ ವ್ಯಾಪಾರದಿಂದ ಧೀರ್ಘ ಕಾಲ ಲಾಭ ಪಡೆದ ಯುಎಸ್, ಈಗ ಸುಂಕಗಳನ್ನು ಚೌಕಾಸಿ ಅಸ್ತ್ರಗಳಾಗಿ ಬಳಸುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಭಾರತದ ಮೇಲೆ ಶೇ. 50 ರಷ್ಟು ಸುಂಕ ವಿಧಿಸುವ ಅಮೆರಿಕದ ಕ್ರಮವನ್ನು ಚೀನಾ ದೃಢವಾಗಿ ವಿರೋಧಿಸುವುದಾಗಿ ತಿಳಿಸಿದ್ದಾರೆ. ಮೌನವಾದಷ್ಟು Bully (ಅಮೆರಿಕ) ಮತ್ತಷ್ಟು ದಬ್ಬಾಳಿಕೆ ಮಾಡುತ್ತದೆ. ಭಾರತ ಮತ್ತು ಚೀನಾ ಏಷ್ಯಾದ ಡಬಲ್ ಎಂಜಿನ್ ಗಳಾಗಿದ್ದು, ಭಾರತದೊಂದಿಗೆ ಚೀನಾ ದೃಢವಾಗಿ ನಿಲ್ಲುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಭಾರತೀಯ ಸರಕುಗಳಿಗೆ ಚೀನಾದ ಮಾರುಕಟ್ಟೆ ತೆರೆಯುವ ಕುರಿತು ಮಾತನಾಡಿದ ಫೀಹಾಂಗ್, ಪರಸ್ಪರರ ಮಾರುಕಟ್ಟೆಯಲ್ಲಿ ಸರಕುಗಳ ವಿನಿಮಯದಿಂದ ಎರಡೂ ದೇಶಗಳು ಸಾಕಷ್ಟು ಪ್ರಗತಿ ಸಾಧಿಸಬಹುದು ಎಂದು ಹೇಳಿದರು.
"ಹೆಚ್ಚಿನ ಭಾರತೀಯ ಸರಕುಗಳು ಚೀನಾ ಮಾರುಕಟ್ಟೆ ಪ್ರವೇಶವನ್ನು ಸ್ವಾಗತಿಸುತ್ತೇವೆ. ಭಾರತವು ಐಟಿ, ಸಾಫ್ಟ್‌ವೇರ್ ಮತ್ತು ಬಯೋಮೆಡಿಸಿನ್‌ನಲ್ಲಿ ಸ್ಪರ್ಧೆ ನೀಡುತ್ತಿದ್ದರೆ, ಚೀನಿಯರು ಎಲೆಕ್ಟ್ರಾನಿಕ್ ಉತ್ಪಾದನೆ, ಮೂಲಸೌಕರ್ಯ ನಿರ್ಮಾಣ ಮತ್ತು ಇಂಧನ ಕ್ಷೇತ್ರದಲ್ಲಿ ವ್ಯಾಪಕ ವಿಸ್ತರಣೆಗೆ ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಎರಡು ಪ್ರಮುಖ ಮಾರುಕಟ್ಟೆಗಳು ಒಂದುಗೂಡಿದರೆ ದೊಡ್ಡದಾರ ಪರಿಣಾಮವನ್ನು ಉಂಟುಮಾಡುತ್ತವೆ. ಭಾರತ ಹೂಡಿಕೆ ಮಾಡಲು ಚೀನಾ ಬಯಸುತ್ತದೆ. ಅಂತೆಯೇ ಭಾರತದಲ್ಲಿ ಚೀನೀ ವ್ಯವಹಾರಗಳಿಗೆ ನ್ಯಾಯಯುತ ವಾತಾವರಣವನ್ನು ನಿರೀಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.
ಆಯ್ದ ಭಾರತೀಯ ವಸ್ತುಗಳ ಆಮದಿನ ಮೇಲೆ ಅಮೆರಿಕ ಶೇ.50ರಷ್ಟು ಸುಂಕ ವಿಧಿಸಿದೆ. ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ರಷ್ಯಾ-ಉಕ್ರೇನ್ ಯುದ್ಧಕ್ಕೆ ಹಣವನ್ನು ನೀಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಹೆಚ್ಚುವರಿ ಸುಂಕಗಳು ಆಗಸ್ಟ್ 27 ರಿಂದ ಜಾರಿಗೆ ಬರಲಿವೆ.
Advertisement