
ನವದೆಹಲಿ: ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯ ಮೇಲೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (Jaishankar) ಅಮೆರಿಕಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ಬಗ್ಗೆ ಅಮೆರಿಕದ ಅಸಮಾಧಾನದ ಬಗ್ಗೆ ಮತನಾಡಿದ ಅವರು, 'ಚೀನಾ ರಷ್ಯಾದ ತೈಲದ ಅತಿದೊಡ್ಡ ಆಮದುದಾರರಾಗಿರುವಾಗ, ಅದರ ಮೇಲೆ ಏಕೆ ಸುಂಕ ವಿಧಿಸಲಾಗಿಲ್ಲ?' ಎಂಬ ಪ್ರಶ್ನೆಯನ್ನು ಅವರು ಎತ್ತಿದರು.
ಅಮೆರಿಕದೊಂದಿಗಿನ ನಡೆಯುತ್ತಿರುವ ವ್ಯಾಪಾರ ವಿವಾದದ ಕುರಿತು ಜೈಶಂಕರ್, ಭಾರತವು ಮೂರು ಕಟ್ಟುನಿಟ್ಟಾದ ಆದ್ಯತೆಗಳನ್ನು ಹೊಂದಿದೆ. ರೈತರು ಮತ್ತು ಸಣ್ಣ ಉತ್ಪಾದಕರ ಹಿತಾಸಕ್ತಿಗಳ ರಕ್ಷಣೆ, ತೈಲ ಆಮದಿನ ಮೇಲಿನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಭಾರತ-ಪಾಕ್ ಸಂಬಂಧಗಳಲ್ಲಿ ಯಾವುದೇ ರೀತಿಯ ಬಾಹ್ಯ ಮಧ್ಯಸ್ಥಿಕೆಗೆ ವಿರೋಧ. ಅಮೆರಿಕದೊಂದಿಗೆ ಮಾತುಕತೆ ನಡೆಯುತ್ತಿದೆ. ಆದರೆ ಈ ವಿಷಯಗಳ ಬಗ್ಗೆ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮಾತುಕತೆಗಳು ಇನ್ನೂ ನಡೆಯುತ್ತಿವೆ. ಆದರೆ ನಮ್ಮ ಕೆಂಪು ರೇಖೆಗಳು ಸ್ಪಷ್ಟವಾಗಿವೆ. ಅತ್ಯಂತ ಮುಖ್ಯವಾದದ್ದು ರೈತರು ಮತ್ತು ಸಣ್ಣ ಉತ್ಪಾದಕರ ಹಿತಾಸಕ್ತಿ. ಯಾವುದೇ ಸರ್ಕಾರವು ಇದರಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ವಿರೋಧ ಪಕ್ಷಕ್ಕೂ ಆಕ್ಷೇಪವಿದ್ದರೆ, ರೈತರನ್ನು ರಕ್ಷಿಸುವ ಪರವಾಗಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಬೇಕು. ರಷ್ಯಾದಿಂದ ತೈಲ ಆಮದಿನ ಮೇಲೆ ಅಮೆರಿಕದ ದ್ವಂದ್ವ ನೀತಿಯನ್ನು ಜೈಶಂಕರ್ ಬಯಲು ಮಾಡಿದರು. ವಿಷಯ ತೈಲವಾಗಿದ್ದರೆ, ರಷ್ಯಾದಿಂದ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ಚೀನಾದ ಮೇಲೆ ಏಕೆ ಸುಂಕ ವಿಧಿಸಲಾಗಿಲ್ಲ? ಎಂದು ಪ್ರಶ್ನಿಸಿದರು.
ಯುರೋಪ್ ಮತ್ತು ಅಮೆರಿಕ ಸ್ವತಃ ರಷ್ಯಾದಿಂದ ಖರೀದಿಸುತ್ತವೆ. ಹಾಗಾದರೆ ಭಾರತದ ಮೇಲೆ ಏಕೆ ಪ್ರಶ್ನೆಗಳಿವೆ? ಭಾರತವು ಯಾರ ಒತ್ತಡಕ್ಕೂ ಮಣಿಯದೆ, ತನ್ನದೇ ಆದ ಹಿತಾಸಕ್ತಿಗಾಗಿ ಇಂಧನ ನೀತಿಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಸ್ಪಷ್ಟವಾಗಿ ಹೇಳಿದರು. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಮೇಲೆ ಹೆಚ್ಚುವರಿಯಾಗಿ ಶೇಕಡ 25ರಷ್ಟು ಸುಂಕವನ್ನು ವಿಧಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದು ರಷ್ಯಾದ ಆದಾಯಕ್ಕೆ ಹಾನಿ ಮಾಡುತ್ತಿದೆ ಎಂದು ವಾಷಿಂಗ್ಟನ್ ಹೇಳಿಕೊಂಡಿದೆ. ಆದರೆ ತೈಲ ಆಮದು ಮುಂದುವರಿಯುತ್ತದೆ ಎಂದು ಭಾರತ ಸ್ಪಷ್ಟಪಡಿಸಿದೆ.
Advertisement