
ನೋಯ್ಡಾ: ಗ್ರೇಟರ್ ನೋಯ್ಡಾ ವರದಕ್ಷಿಣೆ ಕಿರುಕುಳ, ಪತ್ನಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 'ಪಾಪಿ ಪತಿ' ವಿಪಿನ್ ಭಾಟಿ (Vipin Bhati)ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಗ್ರೇಟರ್ ನೊಯ್ಡಾದಲ್ಲಿ ವರದಕ್ಷಿಣೆಗಾಗಿ ಪತಿಯೇ ಪತ್ನಿಗೆ ಮಗನೆದುರು ಬೆಂಕಿ ಹಚ್ಚಿ ಕೊಂದಿರುವ ಘಟನೆ ನಡೆದಿತ್ತು. 36 ಲಕ್ಷ ರೂ. ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಗಂಡ ಮತ್ತು ಅತ್ತೆ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಗುರುವಾರ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಗಂಭೀರ ಸುಟ್ಟ ಗಾಯಗಳೊಂದಿಗೆ ನಿಕ್ಕಿ ಎಂಬ ಮಹಿಳೆ ದಾಖಲಾಗಿದ್ದರು. ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ನಿಕ್ಕಿ ಭಾಟಿ ಪತಿಯನ್ನು ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಆರೋಪಿ ವಿಪಿನ್ ಭಾಟಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಪ್ರಕರಣದ ಇತರೆ ಆರೋಪಿಗಳಾದ ತಾಯಿ ದಯಾ, ತಂದೆ ಸತ್ಯವೀರ್ ಮತ್ತು ಸಹೋದರ ರೋಹಿತ್ ಪರಾರಿಯಾಗಿದ್ದಾರೆ.
ಆಳಿಯನ ಎನ್ಕೌಂಟರ್ ಮಾಡಿ ಎಂದ ಸಂತ್ರಸ್ಥೆ ತಂದೆ
ಮಗಳನನ್ನು ಕೊಂದ ಪಾಪಿಯನ್ನು ಎನ್‌ಕೌಂಟರ್ ಮಾಡಿ ಕೊಲ್ಲಬೇಕೆಂದು ಮೃತ ನಿಕ್ಕಿ ತಂದೆ ಕಣ್ಣೀರು ಹಾಕಿದ್ದಾರೆ. ಮಗಳ ಗಂಡ ವಿಪಿನ್ ಭಾಟಿ, ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದ. ಆದ್ದರಿಂದ ನಿಕ್ಕಿಯನ್ನು ದೂರವಿಡಲು ಬಯಸುತ್ತಿದ್ದ. ವಿಪಿನ್ ಭಾಟಿ ಹಾಗೂ ಆತನ ಕುಟುಂಬಸ್ಥರು ಕೊಲೆಗಾರರು ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆಯ ತಂದೆ, 'ನನ್ನ ಮಗಳು ಪಾರ್ಲರ್ ನಡೆಸುತ್ತಿದ್ದಳು. ಅದರಲ್ಲಿ ಬಂದ ಹಣದಿಂದ ತನ್ನ ಮಗನನ್ನು ಬೆಳೆಸುತ್ತಿದ್ದಳು. ಆದರೆ ಆಕೆಯ ಪತಿ ಹಾಗೂ ಅತ್ತೆ-ಮಾವ ಹಣಕ್ಕಾಗಿ ಅವಳನ್ನು ಹಿಂಸಿಸುತ್ತಿದ್ದರು. ಈಗ ಇಡೀ ಕುಟುಂಬವೇ ಪಿತೂರಿ ಮಾಡಿ ನನ್ನ ಮಗಳನ್ನು ಕೊಂದರು' ಎಂದು ಹೇಳಿದ್ದಾರೆ.
'ಮೊದಲು ಅವರು ವರದಕ್ಷಿಣೆಯಾಗಿ ಸ್ಕಾರ್ಪಿಯೋಗೆ ಬೇಡಿಕೆ ಇಟ್ಟರು. ಅದನ್ನು ನೀಡಲಾಯಿತು. ನಂತರ, ಅವರು ಬುಲೆಟ್ ಬೈಕ್ ಕೇಳಿದ್ದರು. ಅದನ್ನೂ ಸಹ ನೀಡಲಾಯಿತು. ಆದರೂ, ಅವರು ನನ್ನ ಮಗಳನ್ನು ಹಿಂಸಿಸುತ್ತಲೇ ಇದ್ದರು. ಇತ್ತೀಚೆಗೆ ನಾನು ಮರ್ಸಿಡಿಸ್ ಖರೀದಿಸಿದ್ದೆ. ಇದು ವಿಪಿನ್ ಕಣ್ಣಿಗೆ ಬಿದ್ದಿತ್ತು. ಅದನ್ನು ಸಹ ನೀಡುವಂತೆ ಒತ್ತಾಯಿಸುತ್ತಿದ್ದರು' ಎಂದು ತಿಳಿಸಿದ್ದಾರೆ.
ಆರೋಪಿ ಪತಿ ವಿಪಿನ್‌ನನ್ನು ಎನ್‌ಕೌಂಟರ್ ಮಾಡಿ ಕೊಲ್ಲಬೇಕು. ಯೋಗಿಯವರು ಪಿಕ್‌ಪಾಕೆಟ್ ಮಾಡಿದವರ ಕಾಲಿಗೆ ಗುಂಡು ಹಾರಿಸುತ್ತಾರೆ. ಆದರೆ ಇವರೆಲ್ಲ ಕೊಲೆಗಾರರು ಅವರನ್ನು ಕೊಲ್ಲುವುದಿಲ್ಲವೇ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದಾರೆ.
ಬೆಂಕಿ ವಿಡಿಯೋ ವೈರಲ್
ಹತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶದ ಗೇಟರ್ ನೊಯ್ಡಾದ ಸಿರ್ಸಾ ಗ್ರಾಮದ ವಿಪಿನ್ ಎಂಬಾತನಿಗೆ ನಿಕ್ಕಿಯನ್ನು ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆ ತರುವಂತೆ ಒತ್ತಾಯಿಸುತ್ತಿದ್ದ ಗಂಡ ಮತ್ತು ಅತ್ತೆ ಪ್ರತಿದಿನ ನಿಕ್ಕಿ ಮೇಲೆ ದೌರ್ಜನ್ಯ ನಡೆಸುತ್ತಿದ್ದರು.
ಕಳೆದ ಗುರುವಾರ ವರದಕ್ಷಿಣೆ ವಿಚಾರವಾಗಿ ಕಲಹವಾಗಿದೆ. ಹಣ ತರಲು ನಿರಾಕರಿಸಿದ ನಿಕ್ಕಿ ಮೇಲೆ ಹಲ್ಲೆ ನಡೆಸಿದ ಗಂಡ ವಿಪಿನ್ ಮತ್ತವರ ತಾಯಿ ಸೇರಿಕೊಂಡು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನಿಕ್ಕಿ ಸಾವನ್ನಪ್ಪಿದರು. ಈ ವಿಡಿಯೊ ವೈರಲ್ ಆಗಿತ್ತು.
Advertisement