
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫಿಜಿ ಪ್ರಧಾನಿ ಸಿಟಿವೇನಿ ಲಿಗಮಮಡ ರಬುಕಾ ನಡುವಿನ ವ್ಯಾಪಕ ಮಾತುಕತೆಗಳ ನಂತರ ಭಾರತ ಮತ್ತು ಫಿಜಿ ಸೋಮವಾರ ರಕ್ಷಣಾ ಸಹಕಾರ ವಿಸ್ತರಿಸಲು ವ್ಯಾಪಕವಾದ ಕಾರ್ಯ ಯೋಜನೆಯನ್ನು ಅಂತಿಮಗೊಳಿಸಿವೆ.
ಈ ಯೋಜನೆಯು ಜಾಗತಿಕ ದಕ್ಷಿಣ ಮತ್ತು ವಿಶಾಲವಾದ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭಾರತದ ಪ್ರಬಲ ಕಾರ್ಯತಂತ್ರದ ಹೆಜ್ಜೆಯನ್ನು ಗುರುತಿಸುತ್ತದೆ. ಇಲ್ಲಿ ಪ್ರಾಬಲ್ಯ ಸಾಧಿಸಲು ಚೀನಾ ಹವಣಿಸುತ್ತಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಕ್ಷಣಾ ಮತ್ತು ಭದ್ರತಾ ವಲಯದಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಫಿಜಿಯ ಕಡಲ ಭದ್ರತಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಭಾರತವು ತರಬೇತಿ ಮತ್ತು ಸಲಕರಣೆಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಫಿಜಿ ಪ್ರಧಾನಿಯಾದ ಇದೇ ಮೊದಲ ಬಾರಿಗೆ ಭಾನುವಾರ ದೆಹಲಿಗೆ ಆಗಮಿಸಿದ ರಬುಕಾ ಅವರ ಸಮ್ಮುಖದಲ್ಲಿ ರಕ್ಷಣೆ, ವಿಪತ್ತು ನಿರ್ವಹಣೆ, ಶಿಕ್ಷಣ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಏಳು ಒಪ್ಪಂದಗಳಿಗೆ ಫಿಜಿ ಮತ್ತು ಭಾರತ ಸಹಿ ಹಾಕಿದವು.
ಮುಕ್ತ ಮತ್ತು ಸುರಕ್ಷಿತ ಇಂಡೋ-ಪೆಸಿಫಿಕ್ ವಲಯದ ಖಾತ್ರಿಯಲ್ಲಿ ಫಿಜಿಯನ್ನು ಪ್ರಮುಖ ಪಾಲುದಾರ ರಾಷ್ಟ್ರವಾಗಿ ಭಾರತ ನೋಡುತ್ತಿದೆ.
ಭಾರತ ಮತ್ತು ಫಿಜಿ ಸಾಗರಗಳ ನಡುವೆ ಇರಬಹುದು, ಆದರೆ ನಮ್ಮ ಆಕಾಂಕ್ಷೆಗಳು ಒಂದೇ ದೋಣಿಯಲ್ಲಿ ಸಾಗುತ್ತವೆ" ಎಂದು ಮೋದಿ ಹೇಳುವ ಮೂಲಕ ಪರಸ್ಪರ ಮೌಲ್ಯಗಳು ಮತ್ತು ಕಾರ್ಯತಂತ್ರವನ್ನು ಒತ್ತಿ ಹೇಳಿದರು.
Advertisement