
ಮಧುರೈ: ತಮಿಳುನಾಡಿನ ಮಧುರೈನಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಬೌನ್ಸರ್ ಗಳು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿದೆ.
ನಟನನ್ನು ಹತ್ತಿರದಿಂದ ನೋಡಲು ಪ್ರಯತ್ನಿಸಿದಾಗ ವಿಜಯ್ ಬೌನ್ಸರ್‌ಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರ ಶರತ್ ಕುಮಾರ್ ಆರೋಪಿಸಿದ್ದಾರೆ. 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನ ಮಧುರೈನಲ್ಲಿ ವಿಜಯ್ ಅವರ ರಾಜಕೀಯ ರ‍್ಯಾಲಿಯಲ್ಲಿ ಈ ಘಟನೆ ನಡೆದಿದೆ.
ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ಆಗಸ್ಟ್ 21 ರ ರ‍್ಯಾಲಿಯ ವೀಡಿಯೊದಲ್ಲಿ, ಟಿವಿಕೆ ಮುಖ್ಯಸ್ಥ ವಿಜಯ್ ರ‍್ಯಾಂಪ್ ವಾಕ್ ಮಾಡುವುದನ್ನು ಕಾಣಬಹುದು, ಆದರೆ ಬದಿಗಳಲ್ಲಿ ನೆರೆದಿದ್ದ ಲಕ್ಷಾಂತರ ಜನರು ವಿಜಯ್ ಅವರತ್ತ ಕೈ ಬೀಸಿ, ಘೋಷಣೆ ಕೂಗಿ ಹುರಿದುಂಬಿಸುತ್ತಾರೆ.
ಏಳು ನಿಮಿಷಗಳ ಅವಧಿಯ ವೀಡಿಯೊದ ಪ್ರಾರಂಭದಲ್ಲಿ, ಕನಿಷ್ಠ ಏಳು ಅಡಿ ಎತ್ತರದ ರ‍್ಯಾಂಪ್ ನಿಂದ ಒಬ್ಬ ವ್ಯಕ್ತಿಯನ್ನು ಎಸೆಯುವುದನ್ನು ಕಾಣಬಹುದು. ವಿಜಯ್ ನಡೆಯುತ್ತಿದ್ದಂತೆ ಅವರಿಗೆ ಶಾಲು ನೀಡಲು ಹಲವಾರು ಅಭಿಮಾನಿಗಳು ನುಗ್ಗುತ್ತಾರೆ. ಇದೇ ರೀತಿ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಬೌನ್ಸರ್‌ಗಳು ಹಿಡಿದು ಎಸೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಸಂಬಂಧ ಅವರು ಮಂಗಳವಾರ ಪೆರಂಬಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಜಯ್ ಮತ್ತು ಅವರ ಬೌನ್ಸರ್‌ಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189 (2), 296 (ಬಿ) ಮತ್ತು 115 (ಐ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದು ಕಾನೂನುಬಾಹಿರವಾಗಿ ಸೇರುವುದು ಮತ್ತು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿಯಾಗುವ ಅಪರಾಧಕ್ಕೆ ಕುಮ್ಮಕ್ಕು ನೀಡುವುದನ್ನು ಒಳಗೊಂಡಿರುತ್ತದೆ.
Advertisement