
ಲಖನೌ: ದ್ವಿಚಕ್ರ ವಾಹನದ ಬಾಕ್ಸ್ ನಲ್ಲಿಟ್ಟಿದ್ದ ಸುಮಾರು 80 ಸಾವಿರ ಹಣವಿದ್ದ ಚೀಲ ನಾಪತ್ತೆಯಾಗಿದೆ ಎಂದು ವ್ಯಕ್ತಿ ಚಿಂತಿತನಾಗಿರುವಂತೆಯೇ ಮೇಲಿಂದ ಕೋತಿಯೊಂದು ಹಣದ ಸುರಿಮಳೆ ಸುರಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದ ವಿಚಿತ್ರ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ಕೋತಿಯೊಂದು ಬೈಕ್‌ನ ಬಾಕ್ಸ್ ನಲ್ಲಿಟ್ಟಿದ್ದ 80,000 ರೂ. ನಗದನ್ನು ಕಿತ್ತುಕೊಂಡು ಮರದ ಮೇಲೆ ಏರಿ ಆ ನೋಟುಗಳನ್ನು ಕೆಳಕ್ಕೆ ಎಸೆದಿದೆ.
ಈ ವೇಳೆ ಕೋತಿ ಎಸೆದ ಹಣವನ್ನು ಆರಿಸಿಕೊಳ್ಳಲು ಜನರು ಮುಗಿ ಬೀಳುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ, 'ದೊಂಡಾಪುರ ಗ್ರಾಮದ ನಿವಾಸಿ ಅನುಜ್ ಕುಮಾರ್, ತನ್ನ ತಂದೆ ರೋಹಿತಾಶ್ ಚಂದ್ರ ಅವರೊಂದಿಗೆ ಭೂ ನೋಂದಣಿಗಾಗಿ ಬಂದಿದ್ದರು.
ಅವರು ತಮ್ಮ ಮೊಪೆಡ್‌ನ ಬಾಕ್ಸ್ ನಲ್ಲಿ 80,000 ರೂ. ನಗದನ್ನು ತಂದಿದ್ದರು. ಈ ವೇಳೆ ಬಾಕ್ಸ್ ನಲ್ಲಿದ್ದ ರೋಹಿತಾಶ್ ತನ್ನ ವಕೀಲರಿಗೆ ನೀಡಬೇಕಿದ್ದ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದಾಗ, ಅಲ್ಲಿಗೆ ಬಂದ ಕೋತಿ ವಾಹನದ ಬಾಕ್ಸ್ ತೆರೆದು ಹಣದ ಚೀಲವನ್ನು ಹೊರತೆಗೆದು, ಹತ್ತಿರದ ಮರವನ್ನು ಹತ್ತಿದೆ.
ನೋಟುಗಳ ಹರಿದು ಕೆಳಗೆ ಬಿಸಾಡಿದ ಕೋತಿ
ನಂತರ ಕೋತಿ ನೋಟುಗಳನ್ನು ಹರಿದು ಎಸೆಯಲು ಪ್ರಾರಂಭಿಸಿತು, ಇದು ಆವರಣದಲ್ಲಿ "ಹಣದ ಮಳೆ"ಯನ್ನು ಸೃಷ್ಟಿಸಿತು. ನೋಟುಗಳನ್ನು ನೋಡುತ್ತಲೇ ಸ್ಥಳದಲ್ಲಿ ಜನಜಾತ್ರೆಯೇ ಸೇರಿತು. ನೋಡ ನೋಡುತ್ತಲೇ ಜನ ಮುಗಿಬಿದ್ದು ಹಣದ ನೋಟುಗಳನ್ನು ಆರಿಸಿಕೊಳ್ಳಲು ಮುಗಿಬಿದ್ದರು.
ರೋಹಿತಾಶ್ ಕೈಗೆ ಸಿಕ್ಕಿದ್ದು 52 ಸಾವಿರ ರೂ
ಇನ್ನು ಈ ಅವ್ಯವಸ್ಥೆ ಮುಗಿಯುವ ಹೊತ್ತಿಗೆ, ರೋಹಿತಾಶ್ ಕೇವಲ 52,000 ರೂ.ಗಳನ್ನು ಮಾತ್ರ ಸಂಗ್ರಹಿಸಲು ಯಶಸ್ವಿಯಾದರು. ಬಾಕಿ ಉಳಿದ 28,000 ರೂ.ಗಳ ಪೈಕಿ ಒಂದಷ್ಟು ಹಣ ಸ್ಥಳದಲ್ಲಿದ್ದ ಜನರ ಪಾಲಾಗಿತ್ತು. ಉಳಿದ ಹಣವನ್ನು ಮಂಗ ಹರಿದು ಹಾಕಿತ್ತು.
ಮಿತಿಮೀರಿದ ಮಂಗಗಳ ಕಾಟ
ಬಿಧುನಾ ತಹಸಿಲ್ ಪ್ರದೇಶದಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ಈ ಕುರಿತು ಮಾತನಾಡಿರುವ ಸ್ಥಳೀಯರು "ನಾವು ಆವರಣದಲ್ಲಿ ಆಹಾರವನ್ನು ತಿನ್ನಲು ಸಹ ಸಾಧ್ಯವಿಲ್ಲ. ಸಣ್ಣದೊಂದು ತಪ್ಪು ಸಂಭವಿಸಿದರೂ, ಕೋತಿಗಳು ತಕ್ಷಣ ದಾಳಿ ಮಾಡುತ್ತವೆ ಅಥವಾ ವಸ್ತುಗಳನ್ನು ಕಸಿದುಕೊಳ್ಳುತ್ತವೆ" ಎಂದು ದೂರಿದ್ದಾರೆ.
Advertisement