

ಮುಂಬೈ: ಬಾಲಿವುಡ್‌ನ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್, ರಾಜಕೀಯ ಸೇರ್ತಾರೆ ಎಂಬ ಊಹಾಪೋಹಗಳು ಬಹಳ ದಿನಗಳಿಂದ ಕೇಳಿಬರುತ್ತಲೇ ಇದೆ. ಕೊನೆಗೂ ಈ ಬಗ್ಗೆ ಅವರು ಮೌನ ಮುರಿದಿದ್ದು, ನಾನು ರಾಜಕೀಯ ಸೇರಲ್ಲ ಎಂದು ದೃಢವಾಗಿ ಹೇಳಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮೊದಲ ಬಾರಿಗೆ ವರದಿಯಾಗಿತ್ತು. ತದನಂತರ ಅವರ ರಾಜಕೀಯ ಪ್ರವೇಶದ ಬಗ್ಗೆ ವದಂತಿಗಳು ಹರಿದಾಡುತ್ತಲೇ ಇದ್ದವು. ಅನೇಕ ಸಂದರ್ಶನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರಿಗೆ ಈ ಪ್ರಶ್ನೆ ಎದುರಾಗುತ್ತಲೇ ಇತ್ತು.
ಇತ್ತೀಚಿಗೆ ಸುದ್ದಿಸಂಸ್ಥೆ ANI ಜೊತೆಗೆ ಮಾತನಾಡಿದ ಮಾಧುರಿ ದೀಕ್ಷಿತ್, ತಾನು ಯಾಕೆ ರಾಜಕೀಯಕ್ಕೆ ಕಾಲಿಡುತ್ತಿಲ್ಲ ಎಂಬುದನ್ನು ವಿವರಿಸಿದರು. ತನ್ನ ವ್ಯಕ್ತಿತ್ವ ಮತ್ತು ಆಕಾಂಕ್ಷೆಗಳು ಚುನಾವಣಾ ಜವಾಬ್ದಾರಿಗಳಿಗಿಂತ ಸೃಜನಶೀಲ ಅಭಿವ್ಯಕ್ತಿಯೊಂದಿಗೆ ಹೆಚ್ಚು ಹೊಂದಿಕೆಯಾಗುತ್ತವೆ ಎಂದು ಹೇಳಿದ್ದಾರೆ.
ನನಗೆ ರಾಜಕೀಯ ಸೂಕ್ತವಲ್ಲ ಎಂದು ನಂಬುತ್ತೇನೆ. ಕೆಲಸದ ಮೂಲಕ ಪ್ರಭಾವ ಬೀರುವ ಮತ್ತು ಸ್ಫೂರ್ತಿ ನೀಡುವ ಕಲಾವಿದೆ ಪಾತ್ರವೇ ತನಗೆ ಹೆಚ್ಚು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಿಜವಾಗಿಯೂ ರಾಜಕೀಯದಲ್ಲಿರಬೇಕೆಂಬುದು ನನ್ನ ಮಹತ್ವಾಕಾಂಕ್ಷೆಗಳಲ್ಲಿ ಒಂದಾಗಿಲ್ಲ ಅಥವಾ ಅಲ್ಲಿ ನನ್ನನ್ನು ನೋಡಲು ಬಯಸಲ್ಲ ಎಂದು ಮಾಧುರಿ ದೀಕ್ಷಿತ್ ಹೇಳಿದ್ದಾರೆ.
ತೇಜಾಬ್', 'ಹಮ್ ಆಪ್ಕೆ ಹೈ ಕೌನ್..!', 'ದಿಲ್ ತೋ ಪಾಗಲ್ ಹೈ' ಮತ್ತು 'ದೇವದಾಸ್' ನಂತಹ ಹಿಟ್ ಚಿತ್ರಗಳೊಂದಿಗೆ ಭಾರತೀಯ ಚಿತ್ರರಂಗದಲ್ಲಿ ಶಾಶ್ವತ ಐಕಾನ್ ಆಗಿರುವ ಮಾಧುರಿ, ಒಬ್ಬ ಕಲಾವಿದೆಯಾಗಿ ತಾನು ಸೃಷ್ಟಿಸಬಹುದಾದ ಪ್ರಭಾವವು ರಾಜಕೀಯ ವೇದಿಕೆಗಿಂತ ಹೆಚ್ಚು ಅರ್ಥಪೂರ್ಣ ಮತ್ತು ನೈಜವಾಗಿರುತ್ತದೆ ಎಂದಿದ್ದಾರೆ.
Advertisement